ಹಾವೇರಿ –
ಕೈದಿಗಳಿಗೆ ಯಾವುದೇ ತೊಂದರೆಯಾಗದಂತೆ, ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಜೈಲು ಸಿಬ್ಬಂದಿಗಳೇ ಹೊಡೆದಾಡಿಕೊಂಡಿದ್ದಾರೆ. ಹೌದು ಇಂಥಹೊದೊಂದು ಘಟನೆ ಕಂಡು ಬಂದಿದ್ದು ಹಾವೇರಿಯ ಕೇಂದ್ರ ಕಾರಾಗೃಹದಲ್ಲಿ.
ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಮತ್ತು ವೀಕ್ಷಕನ ನಡುವೆ ಮಾರಾಮಾರಿ ನಡೆದಿದೆ. ಇಬ್ಬರೂ ಪ್ರತ್ಯೇಕವಾಗಿ ಹಾವೇರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧೀಕ್ಷಕ ತಿಮ್ಮಣ್ಣ ಭಜಂತ್ರಿ ಅವರು ಕೊಲೆ ಮಾಡುವ ಉದ್ದೇಶದಿಂದ ವಿಚಾರಣಾಧೀನ ಕೈದಿಯೊಂದಿಗೆ ಸೇರಿಕೊಂಡು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಮೇಲಾಧಿಕಾರಿಗೆ ಮತ್ತು ಧಾರವಾಡ ಕಾರಾಗೃಹದ ಅಧೀಕ್ಷಕರಿಗೆ ತಮ್ಮ ಬಗ್ಗೆ ಸುಳ್ಳು ಆರೋಪ ಮಾಡಿ ಹಾಗೂ ಜೈಲಿನಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಸುತ್ತಿರುವುದಾಗಿ ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಜಿಲ್ಲಾ ಕಾರಾಗೃಹ ವೀಕ್ಷಕ ಪುಂಡಲೀಕ ಫಕ್ಕೀರಪ್ಪ ಪವಾರ ಹಾವೇರಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನೂ ಮತ್ತೊಂದೆಡೆ ಕಾರಾಗೃಹ ಕಾರಾಗೃಹದ ಅಧೀಕ್ಷಕರ ತಿಮ್ಮಣ್ಣ ಭಜಂತ್ರಿ ಕೂಡಾ ಪ್ರತಿ ದೂರು ದಾಖಲಿಸಿದ್ದಾರೆ. ವೀಕ್ಷಕ ಪುಂಡಲೀಕ ಪವಾರ ಕರ್ತವ್ಯದ ಸ್ಥಳವನ್ನು ಬಿಟ್ಟು, ಕೈದಿಗಳಿಗೆ ತಯಾರಿಸಿದ ಆಹಾರವನ್ನು ಸೇವಿಸುತ್ತಿದ್ದರು. ಅದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿದ್ದಾರೆ, ಹಲ್ಲೆ ನಡೆಸಿ, ಕೊಲೆಗೆ ಮುಂದಾಗಿದ್ದಾರೆ. ಇವರಿಗೆ ಧಾರವಾಡ ಕೇಂದ್ರ ಕಾರಾಗೃಹದ ಎಂ.ಮರಿಗೌಡ ಎಂಬುವರು ಹಲ್ಲೆ ನಡೆಸಲು ಪ್ರಚೋದನೆ ನೀಡಿದ್ದಾರೆ ಎಂದು ಕಾರಾಗೃಹದ ಅಧೀಕ್ಷಕರ ತಿಮ್ಮಣ್ಣ ಭಜಂತ್ರಿ ಪ್ರತಿ ದೂರು ದಾಖಲಿಸಿದ್ದಾರೆ.
ದೂರು ಪ್ರತಿ ದೂರು ನೀಡಿರುವ ಕಾರಾಗೃಹದ ಇಬ್ಬರೂ ಜಿಲ್ಲಾ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಇನ್ನೂ ಕಾರಾಗೃಹದಲ್ಲಿನ ಸಿಬ್ಬಂದಿಗಳ ಗಲಾಟೆ ಪ್ರಕರಣವನ್ನು ತಿಳಿದ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ ಡಿಐಜಿ ಅವರ ಆದೇಶದ ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಪ್ರಕರಣದ ಬಗ್ಗೆ ಮಾಹಿತಿ ಪಡೆದು
ಕೊಂಡು ಶೀಘ್ರವೇ ಮೇಲಧಿಕಾರಿಗಳಿಗೆ ಈ ಕುರಿತಂತೆ ಶೀಘ್ರ ವರದಿಯೊಂದನ್ನು ಸಲ್ಲಿಸುವುದಾಗಿ ತಿಳಿಸಿದರು. ಇನ್ನೂ ಇವೆಲ್ಲದರ ನಡುವೆ ಈ ಒಂದು ಘಟನೆಯನ್ನು ಖಂಡಿಸಿ, ಕಾರಾಗೃಹದ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಕಾರಾಗೃಹದ ಹೊರಭಾಗದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಒಟ್ಟಾರೆ ನ್ಯಾಯಾಂಗ ಬಂಧನಕ್ಕೊಳಗಾಗಿರುವವರ ರಕ್ಷಣೆ ಮಾಡುವ ಬದಲಿಗೆ ಕಾರಾಗೃಹದ ಸಿಬ್ಬಂದಿಗಳೇ ಹೀಗೆ ಮಾಡಿದರೆ ಒಳಗಿನವರ ಕಥೆ ಏನು ಎಂಬ ಪ್ರಶ್ನೆ ಕಾಡುತ್ತಿದೆ.