ಕೋಲಾರ –
ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಅವೈಜ್ಞಾನಿಕ ಪ್ರಕ್ರಿಯೆಯನ್ನು ಕೈಬಿಡಬೇಕು.ಸಹ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಮಾನಸಿಕ ಸ್ಥೈರ್ಯ ಕುಗ್ಗಿ ಸುವ ಕೆಲಸ ಮಾಡಬಾರದು ಎಂದು ಸಹ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಕೋಲಾರ ದಲ್ಲಿ ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಸರ್ಕಾರದ ಸುತ್ತೋಲೆಯಲ್ಲಿ 2022ನೇ ಸಾಲಿನ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಅನೇಕ ನ್ಯೂನತೆಗಳಿದ್ದು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ 40:1 ಆಗಿದ್ದು ಸರ್ಕಾರಿ ಪ್ರೌಢ ಶಾಲೆಗಳಲ್ಲಿ 70:1 ಮಾಡಿರುವುದು ಅವೈಜ್ಞಾನಿಕ.ಇದು ಮಕ್ಕಳ ನಡುವೆ ತಾರತಮ್ಯ ಮೂಡಿಸಿ ಮಕ್ಕಳ ಹಕ್ಕುಗಳ ನ್ನು ದಮನ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಹೇಳಿದರು ಅಲ್ಲದೇ ಬೋಧನೆಗೂ ಅಡ್ಡಿಯಾಗಿದೆ ಎಂದು ಸಹ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

‘2019-20ನೇ ಸಾಲಿನಲ್ಲಿ ಹೆಚ್ಚುವರಿ ಎಂದು ಗುರುತಿಸಿ ಸುಮಾರು ಶಿಕ್ಷಕರನ್ನು ಸ್ಥಳಾಂತರಿಸಲಾಗಿತ್ತು. ನಂತರ ವರ್ಗಾವಣೆ ಸಂದರ್ಭದಲ್ಲಿ ಸಂಬಂಧಿಸಿದ ಸುಮಾರು ಶಾಲೆಗಳಲ್ಲಿ ಹುದ್ದೆ ಸೃಷ್ಟಿಸಿ ವರ್ಗಾವಣೆ ನೀಡಲಾಯಿತು. 2022-23ನೇ ಸಾಲಿನ ಹೆಚ್ಚುವರಿ ಆದೇಶದ ಪ್ರಕಾರ ಜಿಲ್ಲೆಗಳಲ್ಲಿ ಗುರುತಿಸಿರುವಂತೆ ಶಾಲೆಗಳಲ್ಲೇ ಸದರಿ ಹುದ್ದೆ ಗಳನ್ನು ಹೆಚ್ಚುವರಿಯೆಂದು ಗುರುತಿಸಿರುವುದು ಶಿಕ್ಷಕ ವೃಂದಕ್ಕೆ ಮಾಡಿದ ಅನ್ಯಾಯ.ಇದರಿಂದ ಮಕ್ಕಳ ಕಲಿಕಾ ಪ್ರಗತಿಗೆ ಮಾರಕವಾಗಿದೆ ಎಂದರು.ಶಾಲಾ ವಾತಾವರಣ, ಪರಿಸರ ಸಂರಕ್ಷಣೆಯಲ್ಲಿ ವೃತ್ತಿ ಶಿಕ್ಷಕರು ವಿಶೇಷ ಶಿಕ್ಷಕರ ಪಾತ್ರ ನಿರ್ಣಾಯಕ. ಪರಿಸರ ಉಳಿಸುವ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಈ ಹುದ್ದೆಗಳನ್ನು ರದ್ದು ಮಾಡಿದರೆ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಗಿಡ ಮರ ಬೆಳೆಸುವುದರ ಜತೆಗೆ ಬಿಸಿಯೂಟಕ್ಕೆ ಅಗತ್ಯ ಸೊಪ್ಪು, ತರಕಾರಿ ಬೆಳೆಸುವಲ್ಲೂ ವಿಶೇಷ ಶಿಕ್ಷಕರ ಪಾತ್ರ ಮುಖ್ಯವಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಅಭಿಪ್ರಾಯಪಟ್ಟರು.ಪ್ರತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿರುವುದರಿಂದ ವೃತ್ತಿ ಆಧಾರಿತ ಶೈಕ್ಷಣಿಕ ತರಗತಿಗಳ ಕಲಿಕೆಗೆ ತೊಂದರೆಯಾಗುತ್ತದೆ.ಇನ್ನೂ ಇಲಾಖೆ ಕೈಗೊಂಡಿರುವ ಈ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು ಮತ್ತು ಶಿಕ್ಷಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಸಬೇಕು ಎಂದು ಕೋರಿದರು.ಈ ಒಂದು ಸಮಯದಲ್ಲಿ ಶಿಕ್ಷಕರಾದ ಬಿ.ಎ.ಕವಿತಾ,ಶಿವಕು ಮಾರ್,ಓ.ಮಲ್ಲಿಕಾರ್ಜುನ್,ಶೈಲಾ,ನಾರಾಯಣರೆಡ್ಡಿ, ಉಮೇರಾ ಫಾತಿಮಾ,ಜಯಂತಿ, ಜ್ಯೋತಿ,ರಾಮಲಿಂಗಪ್ಪ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್,ಉಪಾ ಧ್ಯಕ್ಷೆ ಧನಲಕ್ಷ್ಮಿ,ಪದಾಧಿಕಾರಿಗಳಾದ ಆಂಜನೇಯ, ಮುರಳಿ, ಶ್ರೀನಿವಾಸಲು ಹಾಜರಿದ್ದರು.





















