ಬೆಂಗಳೂರು –
ಗೋಕಾಕ್ ಸಾಹುಕಾರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ SIT ತನಿಖಾಧಿಕಾರಿಗಳು ಇಬ್ಬರು ಪತ್ರಕರ್ತರು, ಓರ್ವ ಪತ್ರಕರ್ತನ ಪತ್ನಿಗೆ ನೋಟಿಸ್ ಜಾರಿ ಮಾಡಿ, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಇಬ್ಬರು ಪತ್ರಕರ್ತರು, ಶಿರಾದಲ್ಲಿ ನೆಲೆಸಿರುವ ಪತ್ರಕರ್ತನೋರ್ವನ ಪತ್ನಿ ಹಾಗೂ ಸಿಡಿಯಲ್ಲಿ ಧ್ವನಿ ಹೊಂದಿರುವ ವ್ಯಕ್ತಿಗೆ SIT ತನಿಖಾಧಿಕಾರಿಗಳು ನೋಟಿಸ್ ನೀಡಿದ್ದು, ಪೊಲೀಸರ ಮುಂದೆ ಹಾಜರಾಗಿ, ದೂರಿನನ್ವಯ ವಿವರ ನೀಡುವಂತೆ ಹೇಳಿದ್ದಾರೆ.

ಪ್ರಮುಖವಾಗಿ ಪತ್ರಕರ್ತನ ಪತ್ನಿಗೆ ಬಸವನಗುಡಿ ಮಹಿಳಾ ಠಾಣೆಗೆ ಹಾಜರಾಗಲು ಸೂಚನೆ ಕೊಡಲಾಗಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅಲ್ಲದೆ, ಇತ್ತೀಚಿಗೆ SIT ತನಿಖಾಧಿಕಾರಿಗಳು ತುಮಕೂರು ಮೂಲದ ಪತ್ರಕರ್ತನ ಮನೆ ಮೇಲೆ ದಾಳಿ ನಡೆಸಿದಾಗ ಸೂಕ್ತ ರೀತಿಯಲ್ಲಿ ಆರೋಪಿಯ ಪತ್ನಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದರ ನಡುವೆ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.