ಹಾಸನ –
ಇತ್ತೀಚಿಗೆ ಹಲವು ಕಾರಣಗಳಿಂದ ಸರ್ಕಾರಿ ಶಾಲೆಗಳು ಬೇಡಿಕೆ ಪಡೆದುಕೊಳ್ಳುತ್ತಿರುವ ನಡುವೆ ಕೆಲವು ಶಾಲೆಗಳಿಗೆ ಶಿಕ್ಷಕರ ಕೊರತೆ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿವೆ

ಇದು ಒಂದು ವಿಚಾರವಾದರೆ ಇದರ ನಡುವೆ ಇಲ್ಲೊಂದು ಪ್ರತಿಷ್ಠಿತ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯರಿಬ್ಬರ ಕಿತ್ತಾಟದಿಂದಾಗಿ ವಿದ್ಯಾರ್ಥಿಗಳು ಪಾಠ ಪ್ರವಚನದಿಂದ ವಂಚಿತರಾಗಿ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಪಟ್ಟು ಹಿಡಿದಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆರೋಡಿಯಲ್ಲಿ ನಡೆದಿದೆ.ವರ್ತನೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದ್ದು ತಮ್ಮ ಮಕ್ಕಳ ಟಿ ಸಿ ಕೇಳಲು ಬಂದ ಪೋಷಕರೊಂದಿಗೆ ಜಗಳವಾಡಿದ್ದು, ಈ ಬಗ್ಗೆ ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ.
ಶಾಲೆಯಲ್ಲಿ ಶಿಕ್ಷಕಿಯರ ಬಿಗ್ ಫೈಟ್
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಗೀತಾಂಜಲಿ ಮತ್ತು ಸಂಧ್ಯಾ ಎಂಬ ಶಿಕ್ಷಕಿಯರಿಬ್ಬರ ನಡುವಿನ ಜಗಳ ದಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯಪಡುತ್ತಿದ್ದು ನಮಗೆ ಟಿಸಿ ಕೊಡಿ ನಾವು ಬೇರೆ ಶಾಲೆಗೆ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರಿಬ್ಬರು ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳ ಮುಂದೆಯೇ ಅಡುಗೆ ಪಾತ್ರೆ ಹಾಗೂ ಸೌಟುಗಳಿಂದ ಬಡಿದಾಡಿಕೊಂಡಿದ್ದಾರೆ.ಇದನ್ನು ಕಂಡು ಭಯಗೊಂಡ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಪೋಷಕರ ಜೊತೆಯೂ ಜಗಳ
ವಿಚಾರ ತಿಳಿದ ಪೋಷಕರು ಶಿಕ್ಷಕಿಯರನ್ನು ವಿಚಾರಿಸಿದಾಗ ಈ ಶಿಕ್ಷಕಿಯರು ವಿದ್ಯಾರ್ಥಿಗಳ ಪೋಷಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.ಶಿಕ್ಷಕಿಯರ ಕಿತ್ತಾಟದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಯಾವ ಪ್ರಯೋ ಜನವಾಗದೆ ಗ್ರಾಮ ಪಂಚಾಯಿತಿ ಮುಂಖಡರು ಹಾಗೂ ವಿದ್ಯಾರ್ಥಿಗಳ ಪೋಷಕರು ಸಭೆ ನಡೆಸಿ ಶಿಕ್ಷಕಿಯರನ್ನು ವಿಚಾರಿಸಿದಾಗ ಮತ್ತೆ ಗದ್ದಲ ಹಾಗೂ ಗಲಾಟೆ ಮಾಡಿ ಎಲ್ಲರಿಗೂ ಏಕವಚನದಲ್ಲಿ ಬೈದು ಜಗಳ ಮಾಡಿದ್ದಾರೆ.
ನಮ್ಮ ಮಕ್ಕಳಿಗೆ ಟಿಸಿ ಕೊಟ್ಟುಬಿಡಿ
ಇದರಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ಇಬ್ಬರು ಶಿಕ್ಷಕಿಯರನ್ನು ಬೇರೆ ಕಡೆಗೆ ಕಳುಹಿಸಿ ಇಲ್ಲವೆ ವಿದ್ಯಾರ್ಥಿ ಗಳ ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ. ಶಾಲೆಯ ಶಿಕ್ಷಕಿಯರಾದ ಗೀತಾಂಜಲಿ ಹಾಗೂ ಸಂಧ್ಯಾ ಇವರಿಬ್ಬರ ಜಗಳದಿಂದ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ.
ವೈಯಕ್ತಿಕ ವಿಚಾರಕ್ಕೆ ಶಿಕ್ಷಕರ ಕಿತ್ತಾಟ
ಅನೇಕ ವರ್ಷಗಳಿಂದ ಇದೇ ಶಾಲೆಯಲ್ಲಿರುವ ಇವರಿಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಬಿಟ್ಟು ವೈಯಕ್ತಿಕ ವಿಷಯಗಳಿಗಾಗಿ ಶಾಲೆಯಲ್ಲಿ ಮಕ್ಕಳ ಮುಂದೆ ಜಗಳವಾಡುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿ ಯಾಗಿದ್ದು ಶಿಕ್ಷಕಿಯರನ್ನು ಕೂಡಲೇ ಬೇರೆಡೆಗೆ ವರ್ಗಾ ಯಿಸಬೇಕೆಂದು ಎಸ್‌ಡಿಎಂ ಸಮಿತಿಯ ಅಧ್ಯಕ್ಷೆ ಭವ್ಯಕು ಮಾರ್ ಒತ್ತಾಯಿಸಿದ್ದಾರೆ.
ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು
ಕೆರೋಡಿ ಸರ್ಕಾರಿ ಶಾಲೆಯ ಗೀತಾಂಜಲಿ ಹಾಗೂ ಸಂಧ್ಯಾ ಎಂಬ ಇಬ್ಬರು ಶಿಕ್ಷಕಿಯರು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಅತಿರೇಕದಿಂದ ವರ್ತಿಸುತಿದ್ದಾರೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಗೂ ದೂರು ನೀಡಿದ್ದೇವೆ. ಇವರ ವರ್ತನೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದ್ದು ತಮ್ಮ ಮಕ್ಕಳ ಟಿ ಸಿ ಕೇಳಲು ಬಂದ ಪೋಷಕರೊಂದಿಗೆ ಜಗಳವಾಡಿದ್ದು ಈ ಬಗ್ಗೆ ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ ಎಂದು ಯಸಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹರ್ಷ ಹೇಳಿದ್ದಾರೆ.ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಸ್ಥಿತಿ ಶಾಲೆಯ ವಿದ್ಯಾರ್ಥಿಗಳ ದ್ದಾಗಿದೆ





















