ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ತೆರೆಯದ ಕಾರಣ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ತಯಾರಿಯ ವೆಚ್ಚದ ಮೊತ್ತವನ್ನು ನೇರ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ರಾಜ್ಯ ಸರಕಾರ ಈಗಾಗಲೇ ಆದೇಶಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಹಾಗಾಗಿ ಬ್ಯಾಂಕ್ ಖಾತೆ ಹೊಂದದ ವಿದ್ಯಾರ್ಥಿಗಳು ಮತ್ತು ಅದರ ಜವಾಬ್ದಾರಿ ವಹಿಸಿ ರುವ ಶಿಕ್ಷಕರಿಗೆ ಈ ಪ್ರಕ್ರಿಯೆಯು ದೊಡ್ಡದೊಂದು ಸಮಸ್ಯೆಯೊಂದಿಗೆ ತಲೆನೋವಾಗಿ ಪರಿಣಮಿಸಿದೆ.

ಈ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಶಾಲೆ ತೆರೆದಿಲ್ಲ.ಹಾಗಾಗಿ ಅದನ್ನು ಬೇಸಿಗೆ ರಜೆ ಎಂದು ಪರಿಗಣಿಸಲಾಗಿದೆ.ಆ ಅವಧಿಯ 50 ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯ (ಅಕ್ಕಿ, ಗೋಧಿ, ತೊಗರಿ ಬೇಳೆ, ಎಣ್ಣೆ, ಉಪ್ಪು) ವಿದ್ಯಾರ್ಥಿ ಗಳಿಗೆ ತಲುಪಿದೆ.ಆದರೆ ಅದರ ಅಡುಗೆ ತಯಾರಿಕಾ ವೆಚ್ಚವಾಗಿ ಒಂದು ದಿನಕ್ಕೆ 1ರಿಂದ 5 ತರಗತಿಯ ಮಕ್ಕಳಿಗೆ 4.97 ರೂ. ಮತ್ತು 6-8ನೆ ತರಗತಿಯ ಮಕ್ಕಳಿಗೆ 7.45 ರೂ. ನೀಡಲಾಗುತ್ತಿದೆ.

ಅದನ್ನು 50 ದಿನಕ್ಕೆ ಲೆಕ್ಕ ಹಾಕಿ 1 ರಿಂದ 5 ನೆಯ ತರಗತಿಯ ಪ್ರತೀ ಮಕ್ಕಳಿಗೆ 248.50 ರೂ.ಮತ್ತು 6 ರಿಂದ 8ನೆ ತರಗತಿಯ ಪ್ರತೀ ಮಕ್ಕಳಿಗೆ 372.50 ರೂ. ಪಾವತಿ ಮಾಡಬೇಕಾಗಿದೆ. ಸರಕಾರದ ಆದೇಶ ದಂತೆ ರಾಜ್ಯದ 1ರಿಂದ 8ನೆ ತರಗತಿಯ 40,53,332 ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ

ವಿಪರ್ಯಾಸವೇನೆಂದರೆ 2021-22ನೇ ಶೈಕ್ಷಣಿಕ ವರ್ಷದಲ್ಲಿ 1ರಿಂದ 8ನೇ ತರಗತಿಯ ಮಕ್ಕಳು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದಿರಬೇಕು.ಆದರೆ ಹೆಚ್ಚಿನ ವಿದ್ಯಾರ್ಥಿ ಗಳಲ್ಲಿ ಬ್ಯಾಂಕ್ ಖಾತೆ ಇಲ್ಲ.ವಿದ್ಯಾರ್ಥಿಗಳ ಖಾತೆಗೆ ಜಮೆಯಾಗುವ ಹಣಕ್ಕಿಂತ ಬ್ಯಾಂಕ್ ಖಾತೆ ಮಾಡಿಸ ಲು ಆಗುವ ಖರ್ಚು ಹೆಚ್ಚಾಗಲಿದೆ ಎಂದು ವಿದ್ಯಾರ್ಥಿ ಗಳು ಮತ್ತು ಪೋಷಕರು ಅಭಿಪ್ರಾಯಪಡುತ್ತಾರೆ. ಆದರೆ, ಬ್ಯಾಂಕ್ ಖಾತೆ ಇಲ್ಲದ ವಿದ್ಯಾರ್ಥಿಗಳಿಗೆ ಖಾತೆ ಮಾಡಿಸಲೇಬೇಕು ಎಂದು ಶಿಕ್ಷಣ ಇಲಾಖೆ ಯು ಸೂಚಿಸಿದ ಕಾರಣ ಶಿಕ್ಷಕರು ಅಡಕತ್ತರಿಗೆ ಸಿಲುಕಿದ್ದಾರೆ.

ಈ ಮಧ್ಯೆ ಬಿಸಿಯೂಟ ವಿಭಾಗದ ಅಧಿಕಾರಿಗಳು ಅಂಚೆ ಇಲಾಖೆ ಅಧೀಕ್ಷಕರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದು ಅದರಂತೆ ಅಂಚೆ ಇಲಾಖೆಯು ಶೂನ್ಯ ಠೇವಣಿ ಖಾತೆ ತೆರೆಯಲು ನಿಗದಿತ ಮಾದರಿಯನ್ನು ತಯಾರಿಸಿ ಶಾಲಾ ಮುಖ್ಯಸ್ಥರಿಂದ ಸಹಿ ಹಾಕಿಸಿ ಖಾತೆ ತೆರೆಯಲು ಮುಂದಾಗಿವೆ.

ವಿದ್ಯಾರ್ಥಿಗಳು ತಂದೆ-ತಾಯಿಯ ಆಧಾರ್ ಕಾರ್ಡ್, ಫೋಟೊ ಸಹಿತ ಸೂಕ್ತ ದಾಖಲೆಯನ್ನು ಬ್ಯಾಂಕ್ ಅಥವಾ ಅಂಚೆ ಇಲಾಖೆಗೆ ಕೊಂಡೊಯ್ದು ಖಾತೆ ತೆರೆಯಬಹುದು.ಖಾತೆಯ ಜತೆ ಆಧಾರ್ ಸಂಖ್ಯೆ ಯನ್ನು ಜೋಡಿಸಿದ್ದರೆ ನಗದು ವರ್ಗಾವಣೆ ಮಾಡಲಾಗುತ್ತದೆ.ಆದರೆ ಅಲ್ಪ ಮೊತ್ತದ ಹಣಕ್ಕಾಗಿ ದಾಖಲೆಪತ್ರ ಸಂಗ್ರಹಿಸಿ ಖಾತೆ ತೆರೆಯುವ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಅಷ್ಟೇನೂ ಆಸಕ್ತಿ ವಹಿಸುತ್ತಿಲ್ಲ ಹೀಗಾಗಿ ಇದೊಂದು ಶಿಕ್ಷಕರಿಗೆ ದೊಡ್ಡ ಪ್ರಮಾಣದ ತಲೆನೋವು ಕೆಲಸವಾಗಿದೆ