ನವದೆಹಲಿ –
ಇನ್ನೂ ಮುಂದೆ ಸರಿಯಾಗಿ ವೇತನ, ಪಿಂಚಣಿ ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ಬಡ್ಡಿ ಸಮೇತವಾಗಿ ಎಲ್ಲವನ್ನೂ ಪಡೆಯುವುದು ಸರ್ಕಾರಿ ನೌಕರರ ಹಕ್ಕು. ವೇತನ, ಪಿಂಚಣಿ ಪಾವತಿ ವಿಳಂಬವಾದರೆ ಅದಕ್ಕೆ ಎಲ್ಲಾ ಸೇರಿ ಬಡ್ಡಿಯನ್ನು ಕೂಡ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.ಸ್ವಲ್ಪ ಕಾಲದವರೆಗೆ ಸರ್ಕಾರದಿಂದ ಪಿಂಚಣಿ ಮತ್ತು ವೇತನ ಮುಂದೂಡಿದ್ದ ಪ್ರಕರಣದಲ್ಲಿ ಶೇಕಡ 6 ರಷ್ಟು ಬಡ್ಡಿ ನೀಡುವಂತೆ ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್ ಶೇಕಡ 12 ರಷ್ಟು ಬಡ್ಡಿ ನಿಗದಿಪಡಿಸಿತ್ತು. ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯನ್ನು 2020 ರ ಮಾರ್ಚ್, ಏಪ್ರಿಲ್ ನಲ್ಲಿ ಸ್ವಲ್ಪ ಸಮಯದವರೆಗೆ ಮುಂದೂಡಿತ್ತು.
ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಸರ್ಕಾರ ಪ್ರತಿ ತಿಂಗಳು ಕೊನೆಯ ದಿನಾಂಕದಂದು ನೌಕರರಿಗೆ ವೇತನ, ಪಿಂಚಣಿ ಪಾವತಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಇಲಾಖೆ ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೌಕರ ತಪ್ಪಿತಸ್ಥನಾಗಿದ್ದರೆ ಇಂತಹ ಪಿಂಚಣಿ ನಿಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ಅಲ್ಲದೆ, ತಡೆ ಹಿಡಿಯಲಾದ ವೇತನ ಮತ್ತು ಪಿಂಚಣಿಗೆ ಶೇಕಡ 12ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕೆಂದು ಆಂಧ್ರಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಆಂಧ್ರ ಸರ್ಕಾರ ಪ್ರಶ್ನಿಸಿದ್ದು, ಕೊರೋನಾ ಸಂಕಷ್ಟದಿಂದ ನೌಕರರ ವೇತನ ಪಿಂಚಣಿ ಮುಂದೂಡಲಾಗಿದೆ ಎಂದು ತಿಳಿಸಿದೆ. ಉತ್ತಮ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಡ್ಡಿ ಪಾವತಿಸುವಂತೆ ಕೋರ್ಟ್ ಆದೇಶಿಸಿರುವುದು ಸರಿಯಲ್ಲವೆಂದು ಆಂಧ್ರ ಸರ್ಕಾರ ಹೇಳಿದ್ದು, ಆದರೆ ಇದನ್ನು ಒಪ್ಪದ ಸುಪ್ರೀಂ ಕೋರ್ಟ್ ವೇತನ ಮತ್ತು ಪಿಂಚಣಿ ವಿಳಂಬವಾದ ಕಾರಣ ಶೇಕಡ 6 ರಷ್ಟು ಬಡ್ಡಿ ಪಾವತಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.