ಧಾರವಾಡ –
ಧಾರವಾಡದಲ್ಲಿ ಬೇಸಿಗೆಯ ಬಿಸಿಲಿನ ತಾಪ ಏರುತ್ತಿದ್ದರೆ ಕುಡಿಯುವ ನೀರಿಗಾಗಿ ತಾಲೂಕಿನ ಹಲವು ಹಳ್ಳಿಗಳಲ್ಲಿ ದಾಹ ತೀರದಂತಾಗಿದೆ.ಈಗಲೇ ಹನಿ ಹನಿ ನೀರಿಗಾಗಿ ಪರದಾಡುತ್ತಿರುವ ಚಿತ್ರಣ ಕಂಡು ಬರುತ್ತಿದೆ.ಇದಕ್ಕೆ ಜಿ.ಪಂ.ಕ್ಷೇತ್ರವಾಗಿರುವ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟವೇ ಸಾಕ್ಷಿ.

ಮಾಜಿ ಶಾಸಕಿ ಸೀಮಾ ಮಸೂತಿ ಅವರ ಸ್ವಗ್ರಾಮ, ಮೇಲಾಗಿ ಉಪ್ಪಿನ ಬೆಟಗೇರಿ ಗ್ರಾಮ ಜಿ.ಪಂ.ಕ್ಷೇತ್ರ ಹೊಂದಿದೆ. ಈ ಕ್ಷೇತ್ರದ ಜಿ.ಪಂ.ಸದಸ್ಯ ಕಾಂಗ್ರೆಸ್ ಪಕ್ಷದ ಕಲ್ಲಪ್ಪ ಪುಡಕಲಕಟ್ಟಿ, ತಾ.ಪಂ.ಸದಸ್ಯೆ ಕಾಂಗ್ರೆಸ್ ನ ಶಾಂತಾ ಸಂಕಣ್ಣನವರ ಸಹ ಈ ಗ್ರಾಮದವರೇ.ಇಷ್ಟೆಲ್ಲಾ ರಾಜಕೀಯ ಧುರೀಣರ ಈ ಗ್ರಾಮದಲ್ಲಿ ಈಗ ಕುಡಿಯುವ ನೀರಿಗಾಗಿ ಹಾಹಾ ಕಾರವಾಗುತ್ತಿದೆ.

ಕಳೆದ 10 ದಿನಗಳಿಂದ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ. ಕುಡಿಯುವ ನೀರು ಸಿಗದೇ ಜನರ ಪರದಾಡುತ್ತಿದ್ದು, ಬೇಸಿಗೆಯ ಈ ನೀರಿನ ದಾಹ ನೀಗಿಸಲು ಹರಸಾಹಸ ಪಡುವಂತಾಗಿದೆ.

ಕಳೆದ ಹತ್ತು ದಿನಗಳಿಂದ ಗ್ರಾಮಕ್ಕೆ ಅಮ್ಮಿನಬಾವಿ ಯಿಂದ ಮಲಪ್ರಭೆ ನೀರು ಪೂರೈಕೆ ಆಗದ ಕಾರಣ ಗ್ರಾಮದ ಜನ ಕುಡಿಯುವ ನೀರಿಗಾಗಿ ಅಲೆದಾಟ ಶುರುವಾಗಿದೆ. ಇಡೀ ಗ್ರಾಮಕ್ಕೆ ನೀರು ಪೂರೈಕೆ ಆಗದ ಕಾರಣ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತಾಗಿದೆ.

ಜಗದೀಶ್ ಶೆಟ್ಟರ್ ಕನಸಿನ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಪ್ರಯತ್ನದ ಫಲವಾಗಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ಯೋಜನೆಯಡಿ ಮಲಪ್ರಭಾ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ. ಇದರಿಂದ ನೀರು ಪಡೆಯುವ ಕೊನೆಯ ಊರಾಗಿದೆ. ಇದಕ್ಕೂ ಮುನ್ನ ಪುಡಕಲಕಟ್ಟಿ, ಕರಡೀಗುಡ್ಡ, ಮರೇವಾಡ ಮಾರ್ಗವಾಗಿ ಅಮ್ಮಿನಬಾವಿ ಗ್ರಾಮದಿಂದ ಪೈಪಲೈನ್ ಮೂಲಕ ನೀರು ಪೂರೈಕೆ ಆಗುತ್ತದೆ.

ಈ ಪೈಪಲೈನ್ ಮೂಲಕ ಕೊನೆಯದಾಗಿ ನೀರು ಪೂರೈಕೆ ಆಗುವ ಉಪ್ಪಿನಬೆಟಗೇರಿ ಗ್ರಾಮಕ್ಕೆ ಮೊದಲಿನಿಂದಲೂ ನೀರಿನ ವ್ಯತ್ಯಯ ಆಗುತ್ತಲೇ ಇದೆ. ಈ ವ್ಯತ್ಯಯ ಕೊರತೆ ನೀಗಿಸಲು ಅಮ್ಮಿನ ಬಾವಿಯಿಂದ ಗ್ರಾಮಕ್ಕೆ ಪ್ರತ್ಯೇಕ ಪೈಪಲೈನ್ ಮೂಲಕ ನೀರು ಪೂರೈಕೆ ಮಾಡಬೇಕೆಂಬ ಬೇಡಿಕೆ ಈಗಷ್ಟೇ ಅನುಮತಿ ಸಿಕ್ಕಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದಾಗಿ ಕಾಮಗಾರಿ ಅನುಷ್ಠಾನ ಆಗದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವಂತಾಗಿದೆ.

ಇನ್ನೂ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಅವು ಕಾರ್ಯ ನಿರ್ವಹಣೆ ಇಲ್ಲ. ಅವು ಆರಂಭಕ್ಕಿಂತ ಸ್ಥಗಿತಗೊಂಡಿದ್ದೆ ಜಾಸ್ತಿ.ಇದಕ್ಕೆ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾರಣ. ಸದ್ಯ ಸಂಪೂರ್ಣ ಬಂದ್ ಆಗಿರುವ ಈ ಘಟಕದಿಂದ ಒಂದ ಹನಿ ನೀರೂ ಸಿಗುತ್ತಿಲ್ಲ. ಮುಖ್ಯವಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಸದಸ್ಯರು ಇದೇ ಗ್ರಾಮದವರು ಹೀಗಾಗಿ ಇವರು ಮನಸ್ಸು ಮಾಡಿದರೆ ಇದೇನು ದೊಡ್ಡ ವಿಷಯವಲ್ಲ ಆದರೆ ಅದ್ಯಾಕೋ ಏನೋ ಇವರು ಸುಮ್ಮನಿದ್ದು ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರತಪಿಸುತ್ತಿದ್ದಾರೆ.

ಇವರ ನಿರ್ಲಕ್ಷ್ಯ ದಿಂದಾಗಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರಿತಪಿಸುತ್ತಿದ್ದು ಅಧಿಕಾರಿಗಳು ಕೂಡಾ ಸುಮ್ಮನೆ ಇದ್ದಾರೆ.ಇನ್ನಾದರೂ ಈ ಸಂಬಂಧ ಪಟ್ಟವರು ಇತ್ತ ಲಕ್ಷ್ಯವಹಿಸಬೇಕು. ಈ ಸಮಸ್ಯೆ ಬಗೆಹರಿಸಿ, ನೀರಿನ ದಾಹ ನೀಗಿಸ ಬೇಕೆಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇನ್ನೂ ಇವರೊಂದಿಗೆ ಕ್ಷೇತ್ರದ ಶಾಸಕರು ಕೂಡಾ ಇತ್ತ ಸ್ವಲ್ಪ ಕುಡಿಯುವ ನೀರಿನ ವಿಚಾರದಲ್ಲಿ ಏನಾಗಿದೆ ಎಂಬ ಕುರಿತು ಗಮನ ಹರಿಸಲಿ ಎಂಬುದು ಜನರ ಒತ್ತಾಯ.