ಲಖನೌ –
ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎಂಬ ಮಾತಿದೆ.ಹೀಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 20ಕ್ಕೂ ಹೆಚ್ಚು ಪೊಲೀಸರು ಪ್ರಯಾಣ ಟಿಕೆಟ್ ಪರೀಕ್ಷಕರ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಶ್ರಮಜೀವಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ಬಿಹಾರದ ರಾಜ್ಗಿರ್ಗೆ ತೆರಳುತ್ತಿತ್ತು. ಈ ವೇಳೆ ಟಿಟಿಇ ಉತ್ತರ ಪ್ರದೇಶದ ಬರೇಲಿ ಮತ್ತು ಲಖನೌ ನಡುವೆ ಟಿಕೆಟ್ ಪರೀಕ್ಷಿ ಸಲು ಬಂದಾಗ 20 ಪೊಲೀಸರು ಸಿಕ್ಕಿಬಿದ್ದಿ ದ್ದಾರೆ. ಕೆಲವು ದಿನಗಳ ಹಿಂದೆ ಯುಪಿ ಪೊಲೀಸ್ ಕಾನ್ಸ್‌ಟೇ ಬಲ್ ಒಬ್ಬರು ಲಖನೌದಲ್ಲಿರುವ ವಿಮಾ ಆರ್ಟ್ ನಲ್ಲಿ ಮೂರು ಶರ್ಟ್ ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪೊಲೀಸರು ಸಿಕ್ಕಿಬಿದ್ದಿರುವುದು ಪೊಲೀಸರ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿದೆ.

ಟಿಟಿಇ ಪೊಲೀಸರನ್ನು ಹಿಡಿದಾಗ ದಂಡದಿಂದ ತಪ್ಪಿಸಿಕೊಳ್ಳಲು ಯೂನಿಫಾರ್ಮ್ ತೋರಿಸುವ ಮೂಲಕ ಸಿಬ್ಬಂದಿ ಪೊಲೀಸ್ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾರೆ.ಒಂದು ವೇಳೆ ನನ್ನನ್ನು ಹಿಡಿದರೆ ನಿಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ಬರೆಯುತ್ತೇನೆ. ನೀವು ಜೀವನ ಪೂರ್ತಿ ನನ್ನ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಓರ್ವ ಪೊಲೀಸ್ ಟಿಟಿಇಗೆ ಧಮ್ಕಿ ಹಾಕಿದ್ದಾರೆ. ಅಲ್ಲದೆ, ನೀವು ದಂಡವನ್ನು ಪಡೆದರೆ, ನೀವೇನು ರೈಲ್ವೆ ಸಚಿವರಾಗುವುದಿಲ್ಲ ಎಂದು ಮತ್ತೊರ್ವ ಟಿಟಿಇ ಕುರಿತು ವ್ಯಂಗ್ಯವಾಡಿದ್ದಾರೆ. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಭಾರಿ ವೈರಲ್ ಆಗಿದೆ.
ಪೊಲೀಸರ ಬೆದರಿಕೆಗಳಿಗೆ ರೈಲ್ವೆ ಸಿಬ್ಬಂದಿಯನ್ನು ವಿಚಲಿತಗೊಳಿಸಲಿಲ್ಲ. ಯಾರಿಗೂ ಬಗ್ಗದ ಟಿಟಿಇ ಎಲ್ಲರಿಂದಲೂ ದಂಡವನ್ನು ವಸೂಲಿ ಮಾಡಿಯೇ ಅಲ್ಲಿಂದ ಹೋಗಲು ಅವಕಾಶ ಮಾಡಿಕೊಟ್ಟರು. ರೈಲಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ಅದರಲ್ಲಿ 20 ಮಂದಿ ಪೊಲೀಸರೇ ಇದ್ದರು. ಎಲ್ಲರಿಂದ ಒಟ್ಟು 22,350 ರೂ. ದಂಡವನ್ನು ಸಂಗ್ರಹಿಸಲಾಗಿದೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ತಪ್ಪು ಮಾಡುವ ಜನರನ್ನು ಹಿಡಿದು ಬುದ್ಧಿ ಹೇಳಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪೊಲೀಸರೇ ಹೀಗೆ ಮಾಡಿದರೆ ನಾವ್ಯಾರನ್ನು ನಂಬುವುದು ಎಂದು ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.