ಬೆಂಗಳೂರು –
ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಸಾಲಿನ ದಾಖಲಾತಿ ಆಧಾರದ ಮೇಲೆ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಗುರುತಿಸಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಮರು ಹೊಂದಾಣಿಕೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ನಾಳೆಯಿಂದ ಪ್ರಕ್ರಿಯೆ ಆರಂಭವಾಗಲಿದೆ.
ಜೂ.18 ರಿಂದ ಜು.6ರೊಳಗೆ ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ ವಿಶಾಲ್ ಸುತ್ತೋಲೆ ಹೊರಡಿಸಿ ದ್ದಾರೆ.
ಜೂ.15ರಂದು ಹೆಚ್ಚುವರಿ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ವಿಶೇಷ ಶಿಕ್ಷಕರ ತಾಲ್ಲೂಕು, ಜಿಲ್ಲೆ, ಶಾಲಾವಾರು ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಇಲಾಖಾ ತಂತ್ರಾಂಶದಲ್ಲಿ ಡಿಡಿಪಿಐ ಗಳಿಗೆ ಬಿಡುಗಡೆ ಮಾಡಲಾಗಿದೆ.ಆ ಪಟ್ಟಿಗೆ ತಮ್ಮ ಜಿಲ್ಲೆ, ತಾಲ್ಲೂಕು ಹಂತದಲ್ಲಿ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಕೇಂದ್ರ ಕಚೇರಿಗೆ ಜೂ.18ರೊಳಗೆ ಸಲ್ಲಿಸಬೇಕು. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಜೂ.23ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಈ ಪಟ್ಟಿಯ ಆಧಾರದಲ್ಲಿ ಡಿಡಿಪಿಐ,ಬಿಇಒಗಳು ಜೂ.28 ರೊಳಗೆ ತಾಲ್ಲೂಕಿನೊಳಗೆ,ಜೂ.30ರೊಳಗೆ ಜಿಲ್ಲೆಯ ಒಳಗೆ ಜು.2ರೊಳಗೆ ವಿಭಾಗದೊಳಗೆ(ಜಿಲ್ಲೆಯ ಹೊರಗೆ) ಜು.4ರೊಳಗೆ ಅಂತರ್ ವಿಭಾಗ ಮಟ್ಟದಲ್ಲಿ ಶಿಕ್ಷಕರು ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಪೂರ್ಣ ಮಾಹಿತಿ ಯನ್ನು ಕೇಂದ್ರ ಕಚೇರಿಗೆ ಜು.6ರೊಳಗೆ ಸಲ್ಲಿಸಬೇಕೆಂದು ಆಯುಕ್ತರು ಸೂಚಿಸಿದ್ದಾರೆ.