ಕೊಡಗು –
ಎಸ್ ಬಿಎಂ ಬ್ಯಾಂಕ್ ಎಸ್ ಬಿಐ ಬ್ಯಾಂಕಿನೊಂದಿಗೆ ವಿಲೀನವಾಗಿ ಹಲವು ವರ್ಷಗಳೇ ಆಗಿವೆ. ಆದರೆ ಕೊಡಗು ಜಿಲ್ಲೆಯ ಗ್ರಾಮವೊಂದರಲ್ಲಿ ಎಸ್ ಬಿಎಂ ಮತ್ತೆ ಶುರುವಾ ಗಿದೆ.ಅರೇ ಇವರು ಏನು ಹೇಳತಾ ಇದ್ದಾರೆ ಎಂದು ಅಚ್ಚರಿ ಎನಿಸಿದರೂ ನಿಜವೆ.ಅಷ್ಟಕ್ಕೂ ಎಸ್ ಬಿಎಂ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಲ್ಲ.ಬದಲಾಗಿ ಸ್ಕೂಲ್ ಬ್ಯಾಂಕ್ ಆಫ್ ಮಳ್ಳೂರು.ಇದೇನಿದು ಶಾಲೆ ಹೆಸರಿನಲ್ಲಿ ಬ್ಯಾಂಕ್ ಆರಂಭವಾಗಿದೆಯಾ ಎನ್ನುವ ಪ್ರಶ್ನೆ ನಿಮಗೆ ಕಾಡುತ್ತಿರಬಹುದು.ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಕಿಂಗ್ ವ್ಯವಹಾರ ಕಲಿಸಬೇಕು ಉಳಿತಾಯ ಮನೋಭಾವ ಬೆಳೆಸಬೇಕು ಮತ್ತು ಜಂಕ್ ಫುಡ್ ಗಳಿಂದ ಅವರನ್ನು ದೂರ ಇಲಿಸಬೇಕೆಂಬ ದೃಷ್ಟಿಯಿಂದ ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರು ಅನ್ನು ಆರಂಭಿಸಲಾಗಿದೆ.
ಪುಟ್ಟ ಪುಟ್ಟ ಚೇರ್‌ನಲ್ಲಿ ದೊಡ್ಡ ಜವಾಬ್ದಾರಿ ಹೊತ್ತು ಕುಳಿತಿರೋ ಪುಟ್ಟ ಮಕ್ಕಳು ಕೈಯಲ್ಲಿ ಪಾಸ್ ಬುಕ್ ಜೊತೆಗೆ ಹಣವಿಡಿದು ತಮ್ಮ ಖಾತೆಗೆ ಜಮೆ ಮಾಡುವುದಕ್ಕೆ ಕಾದಿರುವ ವಿದ್ಯಾರ್ಥಿಗಳು.ಅಲ್ಲೇ ಪಕ್ಕದಲ್ಲೇ ಬ್ಯಾಂಕ್ ಲಾಕರ್.ಅಕೌಂಟ್ ನಂಬರ್ ನೋಡಿ ಹಣ ಜಮೆ ಮಾಡಿಸಿ ಕೊಳ್ತಿರುವ ಪುಟಾಣಿಗಳು.
ನಿತ್ಯವೂ ಕೆಲಸ ಮಾಡೋ ಬ್ಯಾಂಕ್
ಇದೆಲ್ಲಾ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಮುಳ್ಳೂರು ಶಾಲೆಯಲ್ಲಿ ಆರಂಭವಾಗಿರುವ ಬ್ಯಾಂಕಿನಲ್ಲಿ ಕಾಣುವ ದೃಶ್ಯಗಳು.ಇದು ನಿತ್ಯವೂ ನಿಜವಾ ಗಿಯೂ ಕಾರ್ಯನಿರ್ವಹಿಸುತ್ತಿರೋ ಎಸ್‌ಬಿಎಂ ಬ್ಯಾಂಕ್.
37 ವಿದ್ಯಾರ್ಥಿಗಳಿಗೂ ಒಂದೊಂದು ಲಾಕರ್
ಇಲ್ಲಿನ ಶಿಕ್ಷಕ ಸತೀಶ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರುನಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿರುವ ಬ್ಯಾಂಕ್ ಇದು.ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 37 ವಿದ್ಯಾರ್ಥಿಗಳಿಗೂ ಒಂದೊಂದು ಲಾಕರ್ ಒಳಗೊಂಡಂತೆ ಒಂದು ಖಜಾನೆಯನ್ನು ಸಿದ್ಧಪಡಿಸಲಾಗಿದೆ.
ಚಿಲ್ಲರೆ ಹಣ ಸಂಗ್ರಹ
ವಿದ್ಯಾರ್ಥಿಗಳು ತಮ್ಮ ತಮ್ಮ ಲಾಕರ್ ಗಳಲ್ಲಿ ತಾವು ವಾರದ ದಿನಗಳಲ್ಲಿ ಉಳಿಸಿರುವ ಚಿಲ್ಲರೆ ಹಣಗಳನ್ನು ತಂದು ಅದರಲ್ಲಿ ಹಾಕುತ್ತಾರೆ.ಶಿಕ್ಷಕರು ಅದನ್ನು ವಿದ್ಯಾರ್ಥಿ ಗಳಿಗೆ ನೀಡಿರುವ ಪಾಸ್ ಬುಕ್ ಗಳಲ್ಲಿ ನಮೂದಿಸುವುದರ ಜೊತೆಗೆ ಖಜಾನೆಯಲ್ಲಿ ಇಟ್ಟಿರುವ ಲೆಡ್ಜರ್ ನಲ್ಲಿ ಕೂಡ ಬರೆದುಕೊಳ್ಳುತ್ತಾರೆ.
ಬೋನಸ್ ಕೂಡಾ ಇದೆ
ನೂರು ರೂಪಾಯಿ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಬೋನಸ್ ಆಗಿ ಒಂದು ಪೆನ್ಸಿಲ್.200 ರೂಪಾಯಿ ಸಂಗ್ರಹಿ ಸಿದ ವಿದ್ಯಾರ್ಥಿಗಳಿಗೆ 1 ಪೆನ್ 300 ರೂ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ವಿದ್ಯಾರ್ಥಿಗಳಲ್ಲಿ ಬಡ್ಡಿಯ ಬಗ್ಗೆ ಅರಿವು ಮೂಡಿಸಲು 500 ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ 5 ಪರ್ಸೆಂಟ್ ಬಡ್ಡಿಯನ್ನು ಶಿಕ್ಷಕರೇ ನೀಡು ವುದರ ಮೂಲಕ ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋ ಭಾವವನ್ನು ಪ್ರೋತ್ಸಾಹಿಸಲಾಗುತ್ತಿದೆ.
ಸಾವಿರ ರೂಪಾಯಿ ಉಳಿತಾಯ ಮಾಡಿದ ವಿದ್ಯಾರ್ಥಿಯ ಹಣವನ್ನು ಆನ್ ಲೈನ್ ಮುಖಾಂತರ ನೇರವಾಗಿ ವಿದ್ಯಾ ರ್ಥಿಯ ನಿಜವಾದ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಶಿಕ್ಷಕ ಸತೀಶ್ ತಿಳಿಸುತ್ತಾರೆ.ಸಂಗ್ರಹಿಸಿದ ಹಣವನ್ನು ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ, ಶಾಲಾ ವಾರ್ಷಿಕೋತ್ಸವಕ್ಕೆ ಲೇಖನ ಸಾಮಗ್ರಿಗಳನ್ನು ಕೊಳ್ಳಲು ಬಳಸಿಕೊಳ್ಳಬಹುದಾಗಿದೆ.
ಬ್ಯಾಂಕಿಂಗ್ ವ್ಯವಹಾರದ ಅನುಭವ ಮೂಡಿಸುವ ಸಲು ವಾಗಿ ವಿದ್ಯಾರ್ಥಿಗಳು ಚಲನ್ ತುಂಬಿ ಹಣ ಕಟ್ಟುವ ಹಾಗೂ ವಿತ್ ಡ್ರಾ ಫಾರ್ಮ್ ಮತ್ತು ಚೆಕ್ ಮುಖಾಂತರ ಹಣ ಹಿಂಪಡೆಯುವ ಯೋಜನೆಯನ್ನು ಕೂಡ ವಿದ್ಯಾರ್ಥಿ ಗಳಿಗೆ ಒದಗಿಸಲಾಗಿದೆ.
ವಿದ್ಯಾರ್ಥಿಗಳ ಅನುಭವಕ್ಕಾಗಿ ಬ್ಯಾಂಕ್ ಆಡಳಿತ ಮಂಡಳಿ ಯನ್ನು ಕೂಡ ರಚಿಸಲಾಗಿದ್ದು ತನ್ವಿ ಎಂ.ಎ ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರಿನ ಮ್ಯಾನೇಜರಾಗಿ,ಪುಣ್ಯ ಅಕೌಂಟೆಂಟ್ ಆಗಿ ವಿದ್ಯಾ ಎಂ ಎಲ್ ಕ್ಯಾಶಿಯರ್ ಆಗಿ ನೇಮಕವಾಗಿದ್ದಾರೆ.ಕೋವಿಡ್ ನಿಂದ ಲಾಕ್ ಡೌನ್ ಆಗಿ ಶಾಲೆಗಳು ಬಂದ್ ಆಗಿದ್ದಾಗ ಇದೇ ಶಿಕ್ಷಕ ಸತೀಶ್ ಅಟ್ಟಣಿಗೆ ಮಾಡಿ ಆನ್‌ಲೈನ್ ತರಗತಿ ಮಾಡುವ ವಿಶೇಷ ಕಾಳಜಿ ವಹಿಸಿದ್ದರು.