ಬೆಂಗಳೂರು –
ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರ ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿ ದ್ದಾರೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಕರ್ನಾಟಕದ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಕುರಿತು ಅಪ್‌ಡೇಟ್ ನೀಡಿದ್ದಾರೆ.ಶಾಸಕರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ಬಳಿಕ ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಎಸ್) ಯೋಜನೆ ಜಾರಿಗೊಳಿಸುವುದು. ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಸರ್ಕಾರ ಜಾರಿಗೊಳಿಸುವ ಆರೋಗ್ಯ ಯೋಜನೆ ಇದು. 2022ರಲ್ಲಿ ಪ್ರಸ್ತಾವಿತವಾದ ಯೋಜನೆ ಇನ್ನೂ ಲೋಕಾರ್ಪಣೆಗೊಂಡಿಲ್ಲ.
ವಿಧಾನಸಭೆ ಕಲಾಪದಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ ಜಿ. ಹೆಚ್. ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಗಳು ಉತ್ತರ ನೀಡಿದ್ದಾರೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಎಸ್) ಯೋಜನೆ ಯಾವಾಗ ಜಾರಿಗೆ ಬರುತ್ತದೆ ಎಂದು ಲಿಖಿತ ಉತ್ತರ ದಲ್ಲಿ ವಿವರಣೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ರಾಜ್ಯ ಸರ್ಕಾರವು ರೂಪಿಸಿರುವ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಎಂದು ಶಾಸಕರು ಪ್ರಶ್ನೆ ಮಾಡಿದ್ದರು.
ಮುಖ್ಯಮಂತ್ರಿಗಳು ಉತ್ತರದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅನುಷ್ಠಾನಗೊಳಿಸಲು ಹಾಗೂ ನಿರ್ವಹಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಒಂದು ಪ್ರತ್ಯೇಕ ಕೋಶವನ್ನು (KASS CELL) ಅವಶ್ಯಕವಿರುವ ಹುದ್ದೆಗಳೊಂದಿಗೆ ಸೃಜಿಸಿ ಆದೇಶಿಸಲಾಗಿದೆ ಮತ್ತು ಅವಶ್ಯವಿರುವ ಮೂಲ ಸೌಲಭ್ಯಗಳ ಪೂರೈಕೆ ಹಾಗೂ ತಂತ್ರಾಂಶ ಅಭಿವೃದ್ಧಿಪ ಡಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವ ಕಾರ್ಯನೀತಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ನೌಕರರು ತಮ್ಮ ಅವಲಂಬಿತ ಕುಟುಂಬದ ಸದಸ್ಯರೊಂದಿಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ನಮೂನೆ ಗಳನ್ನು ನಿಗದಿಪಡಿಸಿ ಆದೇಶಿಸಿದ್ದು, ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ.
ಸಿಬ್ಬಂದಿಗಳ ಅಗತ್ಯ ಮಾಹಿತಿಯನ್ನು ಹೆಚ್‌ಆರ್ ಎಂಎಸ್ ದತ್ತಾಂಶದಲ್ಲಿ ಅಳವಡಿಸುವ ಕಾರ್ಯವು ಸಹ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರಿ ನೌಕರರಿಗೆ ಅನುಗುಣ ವಾಗುವಂತೆ ತಂತ್ರಾಂಶ ಅಭಿವೃದ್ಧಿ ಕಾರ್ಯವು SAST ಹಂತದಲ್ಲಿ ಪರಿಶೀಲನೆಯಲ್ಲಿದೆ. ಈ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲು ಕ್ರಮಕೈಗೊಳ್ಳಲಾ ಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ಶಾಸಕರು ಸದರಿ ಯೋಜನೆಗೆ ಯಾವ-ಯಾವ ಆಸ್ಪತ್ರೆಗಳನ್ನು ಅಧಿಸೂಚಿಸಲಾಗಿದೆ (ಜಿಲ್ಲಾವಾರು ಪಟ್ಟಿ ನೀಡುವುದು) ಎಂದು ಕೇಳಿದ್ದರು.ಉತ್ತರದಲ್ಲಿ ದಿನಾಂಕ 9.3.2023ರ ಸರ್ಕಾರದ ಆದೇಶದಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ವಿವಿಧ ಯೋಜನೆ ಗಳಡಿಯಲ್ಲಿ ಮತ್ತು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿ ನೋಂದಾಯಿತವಾಗಿರುವ (ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ) ಖಾಸಗಿ ಆಸ್ಪತ್ರೆಗಳನ್ನು ಕೆಎಎಎಸ್ ಯೋಜನೆಯಡಿ ಭಾವಿತ ನೋಂದಾವಣೆಗೆ ಒಳಪಡಿಸಲು ಅನುಮತಿಸಲಾಗಿದೆ.
ಕೆಎಎಎಸ್ ಯೋಜನೆಯಡಿ ಖಾಸಗಿ ಆಸ್ಪತ್ರೆಗಳ ಜೊತೆ ನೂತನವಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.ಶಾಸಕರು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯವನ್ನು ಯಾವ ಕಾಲಮಿತಿ ಯಲ್ಲಿ ಅನುಷ್ಠಾನಗೊಳಿಸಲಾಗುವುದು? ಎಂದು ಪ್ರಶ್ನಿಸಿದ್ದರು.
ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದದ್ಯರಿಗೆ ಪ್ರಸ್ತುತ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಹಾಜರಾತಿ ನಿಯಮಗಳು 1963ರಡಿ ವೈದ್ಯಕೀಯ ವೆಚ್ಚ ಮರುಪಾವತಿ ಮತ್ತು ಜ್ಯೋತಿಸಂಜೀವಿನಿ ಯೋಜನೆಯಡಿಯಲ್ಲಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಜಾರಿಯಲ್ಲಿರುತ್ತದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತ ಪ್ರಕ್ರಿಯೆ ಜಾರಿಯ ಲ್ಲಿದ್ದು, ಶೀಘ್ರವಾಗಿ ಜಾರಿಗೊಳಿಸುವಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..