This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಗರಗ ಗ್ರಾಮದಲ್ಲಿ ನೂತನ ಬಸ್‍ ನಿಲ್ದಾಣ ಹಾಗೂ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಚಾಲನೆ

WhatsApp Group Join Now
Telegram Group Join Now

ಧಾರವಾಡ –

ಭಾರತ ಸರ್ಕಾರದ ಜಲಜೀವನ ಮಿಷನ್ ಯೋಜನೆಯ ಸಹಕಾರದಲ್ಲಿ ರಾಜ್ಯಸರ್ಕಾರವು ಜಲಧಾರೆ ಯೋಜನೆ ಮೂಲಕ ಧಾರವಾಡ ಜಿಲ್ಲೆಯ ಪ್ರತಿ ಗ್ರಾಮದ ಪ್ರತಿ ಮನೆಗೆ ಮಲಪ್ರಭಾ ನದಿಯ ಕುಡಿಯುವ ನೀರನ್ನು ಸರಬರಾಜು ಮಾಡಲು ಯೋಜನೆ ಸಿದ್ಧಗೊಳಿಸಿದ್ದು, ಅನುಷ್ಠಾನ ಹಂತದಲ್ಲಿದೆ.ಜಿಲ್ಲೆಯ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ ಎಂದು ಬೃಹತ್, ಮಧ್ಯಮ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನೂತನ ಬಸ್‍ನಿಲ್ದಾಣ ಹಾಗೂ ಗರಗ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತುಪ್ಪರಿಹಳ್ಳ ಹಾಗೂ ಬೆಣ್ಣೆಹಳ್ಳದ ಸರ್ವೇಕಾರ್ಯ ಪೂರ್ಣಗೊಂಡಿದ್ದು, ಡಿಪಿಆರ್ ತಯಾರಾಗಿದೆ. ಕೊರೊನಾದಂತಹ ಸಂದಿಗ್ಧ ಮತ್ತು ಸಂಕಷ್ಟ ಸಂದರ್ಭದಲ್ಲಿಯೂ ಸ್ಥಳೀಯ ಶಾಸಕರ ಪ್ರಯತ್ನದಿಂದಾಗಿ ಮತ್ತು ಜಿಲ್ಲೆಯ ಸಚಿವರ ಸಹಭಾಗಿತ್ವದಲ್ಲಿ ರಾಜ್ಯಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಧಾರವಾಡ ಜಿಲ್ಲೆಯನ್ನು ಕೈಗಾರಿಕಾ ದೃಷ್ಟಿಯಿಂದ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಏಕಸ್ ಮತ್ತು ಯುಕ್ಲೆಸ್ ಕೈಗಾರಿಕೆಗಳು ಧಾರವಾಡ ಜಿಲ್ಲೆಯ ಇಟಗಟ್ಟಿ ಹಾಗೂ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಳ್ಳಲಿದ್ದು, ಸುಮಾರು ರೂ.5 ಸಾವಿರ ಕೋಟಿ ಬಂಡವಾಳವನ್ನು ಹೂಡಿ, ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿವೆ. ಇದರಿಂದ ಸ್ಥಳೀಯವಾಗಿ ಸುಮಾರು 20 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

ಗರಗ ಗ್ರಾಮದಲ್ಲಿ ಸುಮಾರು ರೂ.50 ಲಕ್ಷ ವೆಚ್ಚದಲ್ಲಿ ನೂತನ ಬಸ್‍ನಿಲ್ದಾಣವನ್ನು ನಿರ್ಮಿಸಲಾಗಿದೆ. ಮತ್ತು ಲೋಕೋಪಯೋಗಿ ಇಲಾಖೆಯಿಂದ ಗರಗ ಗ್ರಾಮ ಪರಿಮಿತಿಯಲ್ಲಿ ಸುಮಾರು ರೂ.330 ಲಕ್ಷ ಅಂದಾಜು ವೆಚ್ಚದಲ್ಲಿ 1 ಕಿ.ಮೀ. ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಮತ್ತು ರಸ್ತೆ ಮಧ್ಯದಲ್ಲಿ ದೀಪಗಳ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಮುಂದಿನ ಮೂರು ವರ್ಷದಲ್ಲಿ ಭಾರತ ಸರ್ಕಾರದ ಜಲಜೀವನ್ ಮೀಷನ್ ಯೋಜನೆಯಡಿ ಸುಮಾರು ರೂ.14 ನೂರುಕೋಟಿ ವೆಚ್ಚದಲ್ಲಿ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಸಾರಿಗೆ ಬಸ್‍ಗಳನ್ನು ಹೆಚ್ಚಾಗಿ ಬಳಸಬೇಕು. ಬಸ್‍ನಿಲ್ದಾಣ, ಬಸ್‍ಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ನೀಡಬೇಕು. ಜನವರಿ 30 ರ ವರೆಗೆ ವಿದ್ಯಾರ್ಥಿಗಳು ಶಾಲಾ ಪ್ರವೇಶದ ದಾಖಲಾತಿ ತೋರಿಸಿ ಶಾಲಾ-ಕಾಲೇಜುಗಳಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ಕಳೆದ ಎರಡುವರೆ ವರ್ಷಗಳಲ್ಲಿ ಧಾರವಾಡ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ವಿವಿಧ ರೀತಿಯ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ಸುಧಾರಣೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದರೂ ಜಿಲ್ಲೆಯ ಕೇಂದ್ರ ಹಾಗೂ ರಾಜ್ಯ ನಾಯಕರ ಸಹಕಾರದಿಂದ ಪ್ರತಿ ಗ್ರಾಮದಲ್ಲಿ ರಸ್ತೆ, ಒಳಚರಂಡಿ, ವಸತಿ ಯೋಜನೆ ಮತ್ತು ಶಾಲೆಗಳ ಸುಧಾರಣೆಗೆ ಶ್ರಮಿಸಲಾಗಿದೆ. ಗರಗ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ನೂತನ ಬಸ್‍ನಿಲ್ದಾಣವನ್ನು ಸುಮಾರು 50 ಲಕ್ಷ ವೆಚ್ಚದಲ್ಲಿ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಧಾರವಾಡ ತಾಲೂಕ ಪಂಚಾಯತ್ ಅಧ್ಯಕ್ಷ ರವಿವರ್ಮಾ ಪಾಟೀಲ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರಾದ ಅಶೋಕ ಮಳಗಿ, ಸಂತೋಷಕುಮಾರ ಪಾಟೀಲ, ಪ್ರಕಾಶ ಗೋಡಬೋಲೆ, ಸಿದ್ಧಲಿಂಗೇಶ್ವರ ಮಠದ, ಶರಣ ಪಾಟೀಲ, ಸದಾಶಿವ ತೇಲಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಮುಗದ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮೀಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.



Google News

 

 

WhatsApp Group Join Now
Telegram Group Join Now
Suddi Sante Desk