ಮಂಗಳೂರು –
ಮಂಗಳೂರಿನಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಮಾಡಿದೆ.ಇಬ್ಬರು ಯುವತಿಯರು ಸೇರಿದಂತೆ 4 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಈ ಹಿಂದೆ ಟಾರ್ಗೆಟ್ ಗ್ಯಾಂಗ್ ನ ಬಂಧನವಾದ ಬಳಿಕ ತಣ್ಣಗಾಗಿದ್ದ ಹನಿಟ್ರ್ಯಾಪ್ ಗೆ ಇದೀಗ ನೆರೆಯ ಕುಂಬಳೆಯ ಯುವಕನೊಬ್ಬ ಸಿಲುಕಿದ್ದು, ಈ ಜಾಲದಿಂದ ಹೊರಬರಲಾಗದೆ ಕೊನೆಗೂ ಪೊಲೀಸ್ ಮೊರೆ ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷವೆಂದರೆ ಬಂಧಿತ ಯುವತಿಯರು ಹೊರ ರಾಜ್ಯ, ಹೊರ ಜಿಲ್ಲೆಯವರಲ್ಲ. ಬದಲಿಗೆ ನಮ್ಮ ನೆರೆಯ ಕಾಟಿಪಳ್ಳ ಕೃಷ್ಣಾಪುರದವರು. ಇದು ಹನಿಟ್ರ್ಯಾಪ್ ನ ಹೊಸ ಗ್ಯಾಂಗ್ ಆಗಿದೆ.
ಕುಂಬಳೆ ನಿವಾಸಿ ಯುವಕನೊಬ್ಬನಿಗೆ ಫೇಸ್ಬುಕ್ ನಲ್ಲಿ ಕೃಷ್ಣಾಪುರದ ಇಬ್ಬರು ಮಹಿಳೆಯರು ಪರಿಚಯವಾಗಿದ್ದರು. ಕೆಲವು ದಿನಗಳ ಕಾಲ ಮೆಸೆಂಜರ್ ನಲ್ಲಿ ಯುವಕನ ಜತೆ ಚಾಟ್ ಮಾಡುತ್ತಿದ್ದರು. ಯುವಕನ ವಿಶ್ವಾಸ ಗಳಿಸುತ್ತಿದ್ದಂತೆ ಮೊಬೈಲ್ ನಂಬರ್ ವಿನಿಮಯವಾಯಿತು. ಫೋನ್ ನಂಬರ್ ಸಿಕ್ಕಿದ್ದೇ ತಡ ಯುವತಿಯರು ಕೃಷ್ಣಾಪುರಕ್ಕೆ ಬರುವಂತೆ ಯುವಕನಿಗೆ ಆಹ್ವಾನಿಸಿಯೇ ಬಿಟ್ಟರು.
ಲಡ್ಡು ಬಾಯಿಗೆ ಬಿತ್ತು ಎಂದು ಯುವಕ ಕೂಡ ಖುಷಿಗೊಂಡ. ಕೃಷ್ಣಾಪುರಕ್ಕೆ ಹೊರಟೇ ಬಿಟ್ಟ. ಯುವತಿಯರು ಸಿಕ್ಕಿದರು. ಜತೆಗೆ ಇಬ್ಬರು ಯುವಕರು ಸಿಕ್ಕಿದರು. ಕುಂಬಳೆ ಯುವಕನನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಸಂಪೂರ್ಣ ಬಟ್ಟೆ ಬಿಚ್ಚಿ ಫೋಟೋ ತೆಗೆದು 5 ಲಕ್ಷ ಹಣ ಕೊಡಬೇಕು ಇಲ್ಲದಿದ್ದರೆ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದರು. ಮರ್ಯಾದೆಗೆ ಅಂಜಿದ ಯುವಕ ಕಾರನ್ನು ಅಡವಿಟ್ಟು ಹಣ ಕೊಡುವುದಾಗಿ ಹೇಳಿ ಮನೆಗೆ ಬಂದಿದ್ದನು.
ಆದರೆ ಹನಿಟ್ರ್ಯಾಪ್ ಗ್ಯಾಂಗ್ ನವರು ಅಷ್ಟಕ್ಕೇ ಸುಮ್ಮನಾಗಲಿಲ್ಲ,ಹಣಕ್ಕಾಗಿ ಟಾರ್ಚರ್ ಕೊಡಲು ಆರಂಭಿಸಿದರು. ಕೊನೆಗೂ ಬೇಸತ್ತ ಯುವಕ ಪೊಲೀಸರಿಗೆ ದೂರು ನೀಡಿದ. ಇದೀಗ ಸಿಸಿಬಿ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.