ಬೆಂಗಳೂರು –
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹಿರಿಯ ಐಪಿಎಸ್ ಅಧಿಕಾರಿ ಆರ್. ಪಿ. ಶರ್ಮಾ (ರಾಜ್ ವೀರ್ ಪ್ರತಾಪ್ ಶರ್ಮಾ) ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಶರ್ಮಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಆರ್ ಪಿ ಶರ್ಮಾ ಅವರು ರಾಜ್ಯ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ಕಳೆದ ಡಿಸೆಂಬರ್ ನಲ್ಲಿ ನಿವೃತ್ತರಾಗಿದ್ದರು. ಪತ್ನಿ ಹಿರಿಯ ಐಎಎಸ್ ಅಧಿಕಾರಿ ನಾಗಲಾಂಬಿಕ ದೇವಿ ಹಾಗೂ ಇಬ್ಬರು ಮಕ್ಕಳನ್ನು ಶರ್ಮಾ ಅವರು ಅಗಲಿದ್ದಾರೆ.
ಆರ್.ಪಿ.ಶರ್ಮಾ ಈ ಹಿಂದೆ ಸೆ.2 ರಂದು ಗನ್ ಕ್ಲೀನ್ ಮಾಡುವಾಗ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಗಾಯಗೊಂಡಿದ್ದರು. ಘಟನೆ ಬಳಿಕ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಆಗಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶರ್ಮಾ ಮತ್ತೆ ಆಸ್ಪತ್ರೆ ಸೇರಿದ್ದರು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಾರಿಯಾಗದೆ ಇಂದು ನಿಧನರಾಗಿದ್ದಾರೆ.
ಪತ್ರ ಬರೆದು ಸುದ್ದಿಯಾಗಿದ್ದರು
2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಪೊಲೀಸ್ ಇಲಾಖೆಯಲ್ಲಿ ರಾಜಕಾರಿ ಣಿಗಳ ಹಸ್ತಕ್ಷೇಪದ ವಿರುದ್ಧ ಆರ್.ಪಿ.ಶರ್ಮಾ ಧ್ವನಿ ಎತ್ತಿದ್ದರು. ಅವರು ಬರೆದಿದ್ದ ಪತ್ರವೊಂದು ಮಾಧ್ಯಮಗಳಿಗೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರವು ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿತ್ತು. 2017 ರಲ್ಲಿ ಶರ್ಮಾ ಬೆಂಗಳೂರು ಮಹಾನಗರ ಕಾರ್ಯಪಡೆಯ ಮುಖ್ಯಸ್ಥರಾಗಿದ್ದರು. ಈ ವೇಳೆ ರಾಜಕಾಲುವೆ ಮತ್ತು ಇತರ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಲು ಖಡಕ್ ತೀರ್ಮಾನ ತೆಗೆದುಕೊಂಡು ಜನಪ್ರಿಯರಾಗಿದ್ದರು. ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಸಲ್ಲಿಸುತ್ತಿದ್ದ ದೂರುಗಳ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳುತ್ತಿದ್ದರು. ಈ ನಡೆಯು ಜನಮೆಚ್ಚುಗೆಗೆ ಪಾತ್ರವಾಗಿತ್ತು.ಇವೆಲ್ಲದರ ನಡುವೆ ಈ ಹಿರಿಯ ಪೊಲೀಸ್ ಅಧಿಕಾರಿ ಇನ್ನೂ ನೆನಪು ಮಾತ್ರ.