ಕೊಳ್ಳೇಗಾಲ –
ಪ್ರೇಮಿಗಳ ದಿನದ ಅಂಗವಾಗಿ ಐದು ದಿನಗಳ ಕಾಲ ರಜೆ ಕೊಡಬೇಕು ಎಂದು ನಗರದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಬರೆದಿರುವುದು ಎನ್ನಲಾದ ರಜಾ ಅರ್ಜಿ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಕಾಲೇಜು ಪ್ರಾಂಶುಪಾಲರ ಮೊಹರು ಹಾಗೂ ಸಹಿಯನ್ನು ನಕಲು ಮಾಡಿ ಕಿಡಿಗೇಡಿಗಳು ರಜಾ ಅರ್ಜಿ ಬರೆದು ಅದನ್ನು ವೈರಲ್ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ರಜಾ ಅರ್ಜಿ ಬರೆದವರನ್ನು ಪತ್ತೆ ಹಚ್ಚಬೇಕು’ ಎಂದು ಕಾಲೇಜು ಪ್ರಾಂಶುಪಾಲ ಸೀಗನಾಯಕ ಅವರು ಪಟ್ಟಣ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

‘
‘ಪ್ರಕರಣಕ್ಕೆ ಸಂಬಂಧ ಕಾಲೇಜು ಪ್ರಾಂಶುಪಾಲರು ದೂರು ಬಂದಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದು ಸಬ್ ಇನ್ಸ್ಪೆಕ್ಟರ್ ಹೇಳಿದ್ದು ಪ್ರೇಮಿಗಳ ದಿನದ ಸಮಯದಲ್ಲಿ ಹುಡುಗಿಯರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಐದು ದಿನಗಳ ರಜೆ ನೀಡಬೇಕು ಎಂದು ಕೋರಿ ದ್ವಿತೀಯ ಬಿಕಾಂ ವಿದ್ಯಾರ್ಥಿ ಶಿವರಾಜು ಎಂಬುವವರ ಹೆಸರಿನಲ್ಲಿ ಬರೆದಿದ್ದ ರಜಾ ಅರ್ಜಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅರ್ಜಿಯಲ್ಲಿ ಪ್ರಾಂಶುಪಾಲರ ಮೊಹರು ಹಾಗೂ ಹಸಿರು ಶಾಯಿಯಲ್ಲಿ ಹಾಕಲಾದ ಸಹಿಯೂ ಇತ್ತು.

ರಜಾ ಅರ್ಜಿ ವೈರಲ್ ಆಗಿರುವ ಬಗ್ಗೆ ಮಾಧ್ಯಮ ಗಳಲ್ಲಿ ಸುದ್ದಿ ಪ್ರಕಟವಾಗುತ್ತಲೇ, ಪ್ರಾಂಶುಪಾಲ ಸೀಗನಾಯಕ ಅವರು ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನು ಕರೆದು ವಿಚಾರಣೆ ಮಾಡಿದ್ದಾರೆ.

‘ಅರ್ಜಿಯನ್ನು ನಾನು ಬರೆದಿಲ್ಲ, ಬೇರೆ ಯಾರೋ ನನ್ನ ಹೆಸರಿನಲ್ಲಿ ಬರೆದಿದ್ದಾರೆ’ ಎಂದು ವಿದ್ಯಾರ್ಥಿ ಪ್ರಾಂಶುಪಾಲರಿಗೆ ಸ್ಪಷ್ಟಪಡಿಸಿದ್ದಾರೆ.

ಆ ಬಳಿಕ, ಪ್ರಾಂಶುಪಾಲರು ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಅವರನ್ನು ಪತ್ತೆ ಹಚ್ಚುವುದಕ್ಕಾಗಿ ಪೊಲೀಸರಿಗೆ ದೂರು ನೀಡಲು ಸಭೆ ತೀರ್ಮಾನಿಸಿ ದೂರು ನೀಡಿದ್ದಾರೆ.

ರಜಾ ಅರ್ಜಿಯನ್ನು ನಾನು ಬರೆದಿಲ್ಲ. ನನ್ನನ್ನು ಹಾಸ್ಯ ಮಾಡುವುದಕ್ಕಾಗಿ ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರುವ ಶಂಕೆ ಇದೆ. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದೇನೆ. ಇದಕ್ಕೂ ನನಗೂ ಸಂಬಂಧ ಇಲ್ಲ. ರಜಾ ಅರ್ಜಿ ವೈರಲ್ ಆದ ನಂತರ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು