ಬೆಂಗಳೂರು –
ಹತ್ತಾರು ವರ್ಷಗಳ ನಿರೀಕ್ಷೆಗೆ ಫಲ ಎಂಬಂತೆ ಸಾರ್ವತ್ರಿಕ ವರ್ಗಾವಣೆಯಲ್ಲಿ ತಾವು ಬಯಸಿದ್ದ ಶಾಲೆ,ಸ್ಥಳವನ್ನು ಪಡೆದ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾ ಗಲೇ ಈಗ ಹೆಚ್ಚುವರಿ ಹಣೆಪಟ್ಟಿ ಚಿಂತೆಗೆ ಕಾರಣವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ ಹಾಗೂ ವೃಂದವಾರು ಬಲ ನಿಗದಿಪಡಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿ- ಶಿಕ್ಷಕರ ಅನುಪಾತದನ್ವಯ(ಪಿಟಿಆರ್)ಹಲವು ವೃಂದಗಳಲ್ಲಿ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಲಾಗಿದೆ. ಇವರನ್ನು ಮತ್ತೆ ಮರುನಿಯೋಜಿಸಲಾಗುತ್ತದೆ ಅಥವಾ ವರ್ಗಾವಣೆ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.
ಇದೇ ಮೊದಲ ಬಾರಿಗೆ ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್ಟಿ) ಹಾಗೂ ಪದವೀಧರ ಶಾಲಾ ಶಿಕ್ಷಕರು (ಜಿಪಿಟಿ) ಅನ್ವಯ ವಂದವಾರು ಬಲ ಘೋಷಣೆ ಮಾಡಲಾಗಿದೆ. ಶಿಕ್ಷಕರನ್ನು ವಿಷಯವಾರು ವಿಭಜಿಸಿರುವುದರಿಂದ ಹೆಚ್ಚುವರಿ ಹೊರೆ ಜಾಸ್ತಿಯಾಗಿದೆ.
ಈ ಬಾರಿ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯಲ್ಲಿ 15-20 ಸಾವಿರ ಶಿಕ್ಷಕರಿಗೆ ಅವಕಾಶ ದೊರೆತಿದೆ.ಆದರೆ ಈಗ ಹೆಚ್ಚುವರಿ ಹಣೆಪಟ್ಟಿಯಿಂದಾಗಿ ಇದರ ಅರ್ಧದಷ್ಟು ಶಿಕ್ಷಕರು ಬಾಧಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆಸ್ಥಳ ಆಯ್ಕೆಯ ಅವಕಾಶವನ್ನು ಶಿಕ್ಷಕರಿಗೆ ನೀಡಿದಲ್ಲಿ ಕೊಂಚ ನಿರಾಳರಾಗಬಹುದು ಎನ್ನುವುದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರ ಅಭಿಪ್ರಾಯ.ಕಠಿಣ ನಿಯಮಗಳಿಂದಾಗಿ 15-18 ವರ್ಷಗಳಿಂದ ವರ್ಗಾವಣೆ ದೊರೆಯದೆ ಸಂಕಷ್ಟ ಪಡುತ್ತಿರುವವರ ಸಂಖ್ಯೆಯೂ ದೊಡ್ಡದಿದೆ.ಶಿಕ್ಷಕರ ಕೊರತೆ ನೆಪವೊಡ್ಡದೆ ಸೇವಾ ಹಿರಿತನದವರಿಗೂ ಅವಕಾಶ ನೀಡಲಿ ಎನ್ನುವುದು ಸಂಘದ ಆಗ್ರಹವಾಗಿದ್ದು ಏನೇನಾಗುತ್ತದೆ ಎಂಬೊಂದನ್ನು ಕಾದು ನೋಡಬೇಕು