ಬೆಳಗಾವಿ –
ಮನೆಯಲ್ಲಿ ಟಿ.ವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಐದು ಎಕರೆಗಿಂತ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುವುದು. ಇಂಥವರು ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದ ವರೆಗೆ ಸಮಯ ನೀಡಲಾಗುತ್ತದೆ ಎಂದು ಕತ್ತಿ ಹೇಳಿದ್ದಾರೆ.
ಏಪ್ರಿಲ್ ಬಳಿಕ ಸರ್ಕಾರ ಕಾರ್ಡ್‌ದಾರರ ಪರಿಶೀಲನೆ ನಡೆಸಲಿದ್ದು, ಒಂದು ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್ ಕಾರ್ಡ್ ಹೊಂದಿದ್ದು ಗೊತ್ತಾದರೆ ಅಂಥವರಿಗೆ ದಂಡದ ಜತೆ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು
ಸಚಿವರು, ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು, 1.20 ಲಕ್ಷ ರುಪಾಯಿ ಆದಾಯ ಇರುವವರು ಬಿಪಿಎಲ್ ಕಾರ್ಡ್ ಹೊಂದಿರಲು ಸಾಧ್ಯವೇ ಇಲ್ಲ. ಅದರೂ ಕೆಲ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ.
ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಮಾರ್ಚ್ ಅಂತ್ಯದ ವರೆಗೆ ಸ್ವಯಂ ಪ್ರೇರಿತವಾಗಿ ಬಿಪಿಎಲ್ ಕಾರ್ಡ್ ಸರ್ಕಾರಕ್ಕೆ ಹಿಂದಿರುಗಿಸಲು ಸೂಚನೆ ನೀಡಲಾಗಿದೆ. ಇದಾದ ಬಳಿಕ ಖುದ್ದು ಸರ್ಕಾರವೇ ಸರ್ವೇ ನಡೆಸಿ ಇಂಥವರ ಪತ್ತೆ ಹಚ್ಚಲಿದೆ ಎಂದು ಹೇಳಿದರು.
ಇದೇ ವೇಳೆ ಏಪ್ರಿಲ್ ತಿಂಗಳಿನಿಂದ ಉತ್ತರದ ಜಿಲ್ಲೆಗಳಿಗೆ ಅಕ್ಕಿ ಜತೆ ಜೋಳ ಹಾಗೂ ದಕ್ಷಿಣದ ಜಿಲ್ಲೆಗಳಿಗೆ ಅಕ್ಕಿ ಜೊತೆ ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕತ್ತಿ ಹೇಳಿದರು. ಅಲ್ಲದೇ ಈ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.