ಹೊಸೂರು –
ನಾಲ್ಕು ವರ್ಷಗಳ ಅಜ್ಞಾತವಾಸ ಮುಗಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಕಳೆದ ಜನವರಿ 4ರಂದು ಬಿಡುಗಡೆಯಾಗಿದ್ದ ಶಶಿಕಲಾ ಅವರು ಜ್ಯೋತಿಷಿಗಳ ಸೂಚನೆಯಂತೆ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದರು.
ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಸುರಿಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಿದರು.

ಮಡಿವಾಳ, ಸಿಲ್ಕ್ ಬೋರ್ಡ್ ಮೂಲಕ ಕರ್ನಾಟಕ ಪೊಲೀಸರು ಬಿಗಿಭದ್ರತೆಯಲ್ಲಿ ಶಶಿಕಲಾ ಅವರನ್ನು ಅತ್ತಿಬೆಲೆ ಬಳಿಯ ತಮಿಳುನಾಡಿನ ಗಡಿವರೆಗೂ ಕರೆತಂದರು. ಗಡಿಯಲ್ಲೇ ಕಾದು ನಿಂತಿದ್ದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಪೂರ್ಣಕುಂಭ ಹಿಡಿದು ಚಿನ್ನಮ್ಮಗೆ ಭವ್ಯ ಸ್ವಾಗತ ನೀಡಿದರು.

ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಜನರು ಚಿನ್ನಮ್ಮ ಪರ ಘೋಷಣೆಗಳನ್ನು ಕೂಗಿ ದಾರಿಯುದ್ದಕ್ಕೂ ಹೂಮಳೆಗರೆದರು.

ಇಡಿ ರಸ್ತೆಯುದ್ದಕ್ಕೂ ಜನರ ಜಮಾವಣೆಯಿಂದ ಇತರ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಜಯಲಲಿತಾ ಅವರ ಮಾದರಿಯಲ್ಲೇ ಪೋಷಾಕು ತೊಟ್ಟು ಗೆಲುವಿನ ನಗೆ ಬೀರುತ್ತಲೇ ಅಭಿಮಾನಿಗಳತ್ತ ಕೈ ಮುಗಿದರು. ಇಡೀ ತಮಿಳುನಾಡಿನಲ್ಲಿ ಈ ದೃಶ್ಯ ನೋಡಲು ರಾಜಕೀಯ ಪಂಡಿತರು ತುದಿಗಾಲ ಮೇಲೆ ನಿಂತಿದ್ದರು. ಶಶಿಕಲಾ ಅವರ ಅನುಯಾಯಿಗಳ ಪ್ರಕಾರ, ರಾಜ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಹೇಳಿದರೆ, ಅತ್ತ ಆಡಳಿತಾರೂಢ ಎಐಎಡಿಎಂಕೆ ಅಂತರ ಕಾಯ್ದುಕೊಂಡು ಮುಂದಿನ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ.

ಒಟ್ಟಾರೆ ತಮಿಳುನಾಡಿಗೆ ಶಶಿಕಲಾ ಎಂಟ್ರಿ ಕೊಟ್ಟಿರುವುದು ರಾಜಕೀಯ ಸಂಚಲನ ಸೃಷ್ಟಿಸಿದ್ದು, ಮುಂದೆ ಅವರು ಕಿಂಗ್ ಮೇಕರ್ ಆಗುತ್ತಾರಾ ಅಥವಾ ಸಕ್ರಿಯ ರಾಜಕಾರಣದಲ್ಲಿ ನೇರವಾಗಿಯೇ ಅಖಾಡಕ್ಕೆ ಧುಮುಕುತ್ತಾರಾ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಚೆನ್ನೈಗೆ ತೆರಳಿದ ನಂತರ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದರು.