ಕಾರವಾರ –
ಚಾಲಕನ ನಿಯಂತ್ರಣ ತಪ್ಪಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಕಾರು ಪಲ್ಟಿಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ತಾಲ್ಲೂಕಿನ ಹೊಸಕಂಬಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು ಸಚಿವರ ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ಗುಮೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ್ದು ಕಾರಿನಲ್ಲಿ ಸಚಿವರು, ಅವರ ಪತ್ನಿ ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು.

ಕಾರು ಪಲ್ಪಿಯಾದ ಪರಿಣಾಮ ಸಚಿವ ಶ್ರೀಪಾದ್ ಎಡಗೈಗೆ ಪೆಟ್ಟಾಗಿದ್ದು ಅವರ ಗನ್‌ಮ್ಯಾನ್ ತುಕಾರಾಮ ಪಾಟೀಲ್, ಚಾಲಕ ಚಂದನ್ ಹಾಗೂ ಸಾಯಿಕಿರಣ ಸೇಟಿಯಾ ಎಂಬುವವರಿಗೆ ಗಾಯಗಳಾಗಿವೆ.

ಸಚಿವರನ್ನ ಗೋವಾದ ಬಾಂಬೋಲಿ ಆಸ್ಪತ್ರೆಗೆ ರವಾನಿಸಲಾಗಿದ್ದು ಉಳಿದ ಮೂವರನ್ನು ಕಾರವಾರಗೆ ಶಿಪ್ಟ್ ಮಾಡಲಾಗಿದೆ.

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಅಂಕೋಲಾ ಪೋಲೀಸರು ಧಾವಿಸಿದ್ದು ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಈ ಮಧ್ಯ ಸಚಿವರು ಕುಟುಂಬ ಸಮೇತ ಚಂದವಳ್ಳಿಯ ಬಳಿಯ ಘಂಟೆ ಗಣಪತಿ ದೇವಾಲಯಕ್ಕೆ ಹೋಗಿದ್ದರು.

ಪೂಜೆ ಮುಗಿಸಿಕೊಂಡು ಮರಳಿ ಗೋಕರ್ಣ ಗೆ ಹೊರಟಿದ್ದರು. ಮರಳಿ ಬರುವಾಗ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಕಾರು ಪಲ್ಟಿಯಾಗಿದ್ದು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.ಸಧ್ಯ ಕೇಂದ್ರ ಸಚಿವರನ್ನು ಗೋವಾ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.