ಚೆನೈ –
ಐಪಿಎಲ್ 14ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ವಿರಾಟ್ ಪಡೆ 2 ವಿಕೆಟ್‌ಗಳ ರೋಚಕ ಗೆಲುವು ಪಡೆದು ಸಂಭ್ರಮಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ನರಿಗೆ ಮುಖಭಂಗವಾಗಿದೆ.

ಮುಂಬೈ ಇಂಡಿಯನ್ಸ್ ನೀಡಿದ 160 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಉತ್ತಮ ಕೊಡುಗೆ ಯನ್ನು ನೀಡಿದರು. ಆದರೆ ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ಆರ್‌ಸಿಬಿ ಕಠಿಣ ಕ್ಷಣಗಳನ್ನು ಎದುರಿಸಿದರು. ಅಂತಿಮವಾಗಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿ ವಿಜಯವನ್ನು ಸಾಧಿಸುವಲ್ಲಿ ಯಶಸ್ವಿಯಾ ಯಿತು.ಟಾಸ್ ಸೋತ ಮುಂಬೈ ಇಂಡಿಯನ್ಸ್ ಮೊದಲಿಗೆ ಬ್ಯಾಟಿಂಗ್‌ಗೆ ಇಳಿದಿತ್ತು.

ನಾಯಕ ರೋಹಿತ್ ಶರ್ಮಾ ವಿಕೆಟ್ ಅನ್ನು ಅಗ್ಗಕ್ಕೆ ಕಳೆದುಕೊಂಡ ಮುಂಬೈಗೆ ಸೂರ್ಯಕುಮಾರ್ ಯಾದವ್ ಹಾಗೂ ಕ್ರಿಸ್ ಲಿನ್ ಆಸರೆಯಾಗಿ ಉತ್ತಮ ಮೊತ್ತದತ್ತ ಮುನ್ನುಗ್ಗಿಸಿದರು. ಬಳಿಕ ಸೂರ್ಯಕುಮಾರ್ ಯಾದವ್ ತಂಡದ ಮೊತ್ತ 94 ರನ್ ಗಳಿಸಿದ ವೇಳೆ ವಿಕೆಟ್ ಕಳೆದುಕೊಂಡರೆ 105 ರನ್‌ಗಳಿಸುವಷ್ಟರಲ್ಲಿ ಕ್ರಿಸ್ ಲಿನ್ ಕೂಡ ಸುಂದರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಇನ್ನು ಕಳೆದ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಗುರಿಯಾಗಿದ್ದರೂ ಆರ್‌ಸಿಬಿಗೆ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದ ಮ್ಯಾಕ್ಸ್‌ವೆಲ್ ಅದ್ಭುತ ಆಟವನ್ನು ಪ್ರದರ್ಶಿಸಿದರು. ನಾಯಕ ವಿರಾಟ್ ಕೊಹ್ಲಿ ಜೊತೆಗೆ 42 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೊಹ್ಲಿ 33 ರನ್‌ಗಳಿಸಿದರೆ ಮ್ಯಾಕ್ಸ್‌ವೆಲ್ 39 ರನ್‌ಗಳಿಸಿದರು.

ಆಪತ್ಬಾಂಧವನಾದ ಡಿವಿಲಿಯರ್ಸ್ ಕೋಹ್ಲಿ, ಮ್ಯಾಕ್ಸ್‌ವೆಲ್ ವಿಕೆಟ್ ಕಳೆದುಕೊಂಡ ನಂತರ ಎಬಿ ಡಿವಿಲಿಯರ್ಸ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯಲಿಲ್ಲ. ಆದರೆ ಡಿವಿಲಿಯರ್ಸ್ ಅಬ್ಬರಿಸುತ್ತಲೇ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿದರು. ಅಂತಿಮ ಓವರ್‌ನಲ್ಲಿ 7 ರನ್‌ಗಳ ಗುರಿ ಆರ್‌ಸಿಬಿ ಮುಂದಿತ್ತು. 19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎಬಿ ಡಿವಿಲಿಯರ್ಸ್ 2 ರನ್‌ಗಳನ್ನು ಕದಿಯುವ ಭರದಲ್ಲಿ ರನೌಟ್ ಆಗುವ ಮೂಲಕ ತಂಡ ಮತ್ತೊಂದು ಆಘಾತ ಅನುಭವಿಸಿತು. ಆದರೆ ಮುಂದಿನ ಎರಡು ಎಸೆತಗಳಲ್ಲಿ ಎರಡು ರನ್ ಪಡೆಯುವ ಮೂಲಕ ಅಂತಿಮ ಎಸೆತದಲ್ಲಿ ಆರ್‌ಸಿಬಿ ಜಯ ಸಾಧಿಸಿದೆ.