ಧಾರವಾಡ –
ಮಕ್ಕಳಿಗೆ ಗುಣಾತ್ಮಕ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಧಾರವಾಡ ಕಚೇರಿಯ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಕರೆ ನೀಡಿದರು.
ಇಲ್ಲಿನ ಚನ್ನಬಸವೇಶ್ವರ ನಗರದಲ್ಲಿನ ಲಿಂಗಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಧಾರವಾಡ ತಾಲೂಕ ಶಿಕ್ಷಕರ ದಿನಾಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ,ನಿವೃತ್ತ ಶಿಕ್ಷಕರ ಸನ್ಮಾನ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ನೂರರಷ್ಟು ಸಾಧನೆಗೈದ ಪ್ರೌಢಶಾಲೆಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು. ಶಾಲಾ ಹಂತದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ಸಿಗಬೇಕಿದೆ. ಪ್ರಸ್ತುತ ಸರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ.
ಪರಿಣಿತ ಶಿಕ್ಷಕರು ಇದ್ದಾಗಲೂ ಸರಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗಿಂತ ಹಿಂದುಳಿಯುತ್ತಿರು ವುದು ಖೇದಕರ.
ಈ ಹಿಂದೆ ಶಾಸಕ ವಿನಯ ಕುಲಕರ್ಣಿ ಅವರು ಮತ್ತು ವೈಶುದೀಪ ಫೌಂಡೇಶನ್ ದ ಶಿವಲೀಲಾ ಕುಲಕರ್ಣಿ ಅವರು ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿದ್ದರು. ಈಗಲೂ ಅವರು ನೆರವು ನೀಡಲು ಸಿದ್ಧರಿದ್ದು, ಅವರ ಸಹಕಾರವನ್ನು ಪಡೆಯಲು ಮುಂದಾಗಿ ಎಂದರು.
ಶೈಕ್ಷಣಿಕ ವಲಯದ ಸುಧಾರಣೆಯಲ್ಲಿ ಶಿಕ್ಷಕರು ಇನ್ನೂ ಹೆಚ್ಚು ಶ್ರಮವಹಿಸಬೇಕಿದೆ.ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಸಂಕಲ್ಪ ಮಾಡಬೇಕಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಗಂಭೀರ ವಿಷಯದ ಬಗ್ಗೆ ನಿಗಾವಹಿಸಿ ಸೇವೆ ನಿರ್ವಹಿಸಬೇಕು ಎಂದರು.
ವಿಡಿಯೋ ಮೂಲಕ ಮಾತನಾಡಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ವಿನಯ ಕುಲಕರ್ಣಿ ಅವರು, ಜಿಲ್ಲೆಯ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಪ್ರತಿಯೊಬ್ಬ ಶಿಕ್ಷಕರು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಅಗತ್ಯ ಸಹಕಾರ ಮತ್ತು ನೆರವು ನೀಡುವುದಾಗಿ ಭರವಸೆಯಿತ್ತರು.
ಬೀಳಗಿ ಕಸಾಪ ಅಧ್ಯಕ್ಷ ಜಿ.ಪಿ.ಲೂತಿ ಅವರು ಉಪನ್ಯಾಸ ನೀಡಿದರು.ಡಿಡಿಪಿಐ ಎಸ್.ಎಸ್. ಕೆಳದಿಮಠ, ತಹಶಿಲ್ದಾರ ದೊಡ್ಡಪ್ಪ ಹೂಗಾರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ,
ನಿವೃತ್ತ ಬಿಇಓ ಶ್ರೀಶೈಲ ಕರೀಕಟ್ಟಿ,ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜಶೇಖರ ಹೊನ್ನಪ್ಪನವರ, ಎಲ್ ಐ ಲಕ್ಕಮ್ಮನವರ ಅಜಿತ ದೇಸಾಯಿ,ಎನ್ ಎಸ್ ಕಮ್ಮಾರ ಶಂಕರ ಘಟ್ಟಿ, ಪಿ.ಎಸ್. ಅಂಕಲಿ , ವಿ.ಪಿ.ಜಾಕೋಜಿ, ಕಾಶಪ್ಪದೊಡವಾಡ, ಎಸ್.ಬಿ.ಕೇಸರಿ, ಸುರೇಶ ಮುಗಳಿ, ಇತರರು ವೇದಿಕೆಯಲ್ಲಿದ್ದರು
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸಾವಿತ್ರಿ ಪಟಗಾರ ಪ್ರಾರ್ಥಿಸಿದರು.ಸಿ.ಎಂ.ಕೆಂಗಾರ ಮತ್ತು ತಂಡದವರು ನಾಡಗೀತೆ ಹಾಡಿದರು.ರಂಗನಾಥ ವಾಲ್ಮೀಕಿ ಮತ್ತು ವಿದ್ಯಾ ಜೋಶಿ ನಿರೂಪಿಸಿದರು. ಬಿ.ವಿ.ಛಬ್ಬಿ
ವಂದಿಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..