ಹುಬ್ಬಳ್ಳಿ –
ಎಲ್ಲಿ ನೋಡಿದರೂ ಶಿವಭಕ್ತರು. ಹಣೆ ಮೇಲೆ ವಿಭೂತಿ. ಬಾಯಲ್ಲಿ ಶಿವ ಪಂಚಾಕ್ಷರಿ ಮಂತ್ರ ಜಪಿಸುತ್ತ ಆರಾಧ್ಯ ದೈವವಾದ ಗುರುದ್ವಯರ ರಥವನ್ನ ಎಳೆಯುವ ಸಂಭ್ರಮ ಹೇಳತೀರದು. ಸಾಕ್ಷಾತ್ ಕೈಲಾಸವೇ ಭುವಿಗಿಳಿದ ಅನುಭವ. ಇಷ್ಠಾರ್ಥ ಸಿದ್ಧಿಗಾಗಿ ತೇರಿಗೆ ಹಣ್ಣು, ಉತತ್ತಿ ಎಸೆಯುವ ದೃಶ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು.ಇಂತಹ ವಿಶೇಷ ರೀತಿಯ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ಮಠದ ಆವರಣದಲ್ಲಿ.
ಹೌದು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ವತಿಯಿಂದ ಶಿವರಾತ್ರಿ ಮಹೋತ್ಸವ ದ ನಿಮಿತ್ತ ಇಂದು ಲಕ್ಷಾಂತರ ಭಕ್ತರ ಹರ್ಷೋದ್ಗಾರ ದ ನಡುವೆ ಸಿದ್ಧಾರೂಢ ಸ್ವಾಮಿಯ ರಥೋತ್ಸವ ಸಂಭ್ರಮದಿಂದ ನಡೆಯಿತು. ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆ ಯೇ ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತ ಸಮರ್ಪಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡಿತು. ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ- ಮೇಳ ಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಉದ್ಗಾರ ಭಕ್ತಿಲೋಕ ಧರೆಗಿಳಿಸಿದಂತೆ ಭಾಸವಾಯಿತು.
ಸಂಜೆ 5.30 ಗಂಟೆಗೆ ಸಲ್ಲುವ ಶುಭ ಮುಹೂರ್ತ ದಲ್ಲಿ ಭೂಕೈಲಾಸ, ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳ ನ್ನ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ರು. ಟೆಂಪೊ, ಟ್ರ್ಯಾಕ್ಟರ್, ದ್ವಿಚಕ್ರ, ಕಾರುಗಳಲ್ಲಿ ಮಾತ್ರವಲ್ಲದೆ, ಪಾದಯಾತ್ರೆ ಮೂಲಕವೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ರು. ಶಿವರಾತ್ರಿ ಪ್ರಯುಕ್ತ ವಿಶೇಷ ಕಳೆ ಪಡೆದಿದ್ದ ಶ್ರೀಮಠ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಇನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ರಾಜ್ಯದ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ ದಾವಣಗೆರೆ, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ರು
ಮಹಾ ರಥೋತ್ಸವದ ಅಂಗವಾಗಿ ಸುಮಾರು 70 ಅಡಿ ಎತ್ತರದ ತೇರನ್ನು ಶೃಂಗರಿಸಲಾಗಿತ್ತು. ಮಠದ ಆವರಣದಿಂದ ಹೊರಟ ತೇರು ಮಹಾದ್ವಾರದ ವರೆಗೆ ತಲುಪಿ ಮತ್ತೆ ಮಠಕ್ಕೆ ಮರಳಿತು. ಇನ್ನು ಜಾತ್ರೆಗೆ ಬರುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಲು ಶ್ರೀನಿವಾಸ ನಗರದ ಉದ್ಯಾನದ ಬಳಿ, ಅಂಬೇಂಡ್ಕರ್ ಕ್ರೀಡಾಂಗಣ, ಆನಂದನಗರ ರಸ್ತೆಗೆ ಹೊಂದಿಕೊಂಡು ವ್ಯವಸ್ಥೆ ಮಾಡಲಾಗಿತ್ತು.
ಉತ್ತರ ಕರ್ನಾಟಕದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸಿದ್ಧಾರೂಢ ಮಠಕ್ಕೆ ಬರುವ ಭಕ್ತರಿಗೆ ಊಟ, ಉಪಹಾರದ ಮತ್ತು ಆಟೊ ವ್ಯವಸ್ಥೆ ಹೀಗೆ ಉಚಿತ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿತ್ತು.