ಧಾರವಾಡ –
ಕೋವಿಡ್ ಸಂಕಷ್ಟದ ಅವಧಿಯಲ್ಲಿ ವ್ಯಾಪಾರ ವಹಿವಾಟಿಗೆ ಧಕ್ಕೆ ತಂದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದ ಬೀದಿ ವ್ಯಾಪಾರಸ್ಥರ ಬದುಕಿಗೆ ಹೊಸ ತಿರುವು ದೊರೆತಿದೆ. ಮತ್ತೆ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಸ್ವನಿಧಿ ಸಾಲಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬ್ಯಾಂಕುಗಳು ಮುಂದಾಗಿದ್ದೇ ಇದಕ್ಕೆ ಕಾರಣವಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಕುರಿತು ಬ್ರಹತ್ ಸಾಲ ಮೇಳವನ್ನು ಧಾರವಾಡದ ತನ್ನ ಪ್ರಧಾನ ಕಛೇರಿಯಲ್ಲಿ ಆಯೋಜಿಸಿತ್ತು. ಸಾಲ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ಬೀದಿ ವ್ಯಾಪಾರಿಗಳು ಪ್ರಾದೇಶಿಕ ಮತ್ತು ರಾಷ್ಟ್ರದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದು ಸ್ವ ಉದ್ಯೋಗದ ಮೂಲಕ ನಿರುದ್ಯೋಗ ನಿವಾರಣೆಯಲ್ಲೂ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.

ಸಣ್ಣ ಪುಟ್ಟ ವ್ಯಾಪಾರಸ್ಥರು ಮತ್ತೆ ವ್ಯವಹಾರ ಪ್ರಾರಂಭಿಸದಿದ್ದರೆ ಆರ್ಥಿಕ ಚಕ್ರ ತಿರುಗಲಾರದು ಎಂದರು. ರೂ.10,000 /- ಬಂಡವಾಳ ಮತ್ತೆ ಉದ್ಯೋಗ ಕಟ್ಟಿಕೊಳ್ಳಲು ಕಾಯಕಲ್ಪ ನೀಡಬಲ್ಲದು ಎಂದರು. ಪ್ರಧಾನ ಮಂತ್ರಿ ಸ್ವ ನಿಧಿ ಸಾಲ ಯೋಜನೆಯನ್ವಯ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ವರ್ಷದ ಅವಧಿಗೆ ಆಧಾರ ರಹಿತ ಸಾಲವಾಗಿ ರೂ. 10,000/- ನೀಡಲಾಗುತ್ತದೆ. ಸರಿಯಾಗಿ ಸಾಲ ಮರುಪಾವತಿಸುವವರಿಗೆ ಕೇಂದ್ರ ಸರ್ಕಾರ 7 % ಬಡ್ಡಿ ಸಹಾಯಧನವನ್ನೂ ನೀಡುತ್ತದೆ. ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ವಹಿವಾಟಿಗನುಗುಣವಾಗಿ ಅದಕ್ಕೂ ಪ್ರೂತ್ಸಾಹಧನ ಕೂಡ ನೀಡಲಾಗುವುದು ಎಂದರು.

ಇನ್ನೂ ಬ್ಯಾಂಕು ಇಲ್ಲಿಯವರೆಗೆ 9000 ಅರ್ಜಿ ಸ್ವೀಕರಿಸಿದ್ದು ಅದರಲ್ಲಿ 2000 ಜನರಿಗೆ 2 ಕೋಟಿ ರೂ ಸಾಲ ವಿತರಿಸಿದೆ. ಉಳಿದವುಗಳು ಪರಿಶೀಲನೆಯಲ್ಲಿವೆ. ಈ ಸಾಲ ಯೋಜನೆಯಲ್ಲಿ ಸರಿಯಾಗಿ ಸಾಲ ಮರುಪಾವತಿಸುವವರಿಗೆ ಮತ್ತೆ ಹೆಚ್ಚಿನ ಸಾಲ ನೀಡಿ ವ್ಯವಹಾರ ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಗೋಪಿಕೃಷ್ಣ ಹೇಳಿದರು. ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹು- ಧಾ ಮಹಾನಗರ ಪಾಲಿಕೆಯ ವಿಭಾಗೀಯ ಸಹಾಯಕ ಆಯುಕ್ತ ರಮೇಶ ನೂಲ್ವಿ ಮಾತನಾಡಿ ಕೇಂದ್ರ ಸರ್ಕಾರದ ಈ ಯೋಜನೆಗೆ ಮಹಾನಗರ ಪಾಲಿಕೆ ಹೆಚ್ಚಿನ ಆದ್ಯತೆ ನೀಡಿದ್ದು ಈಗಾಗಲೆ 10000 ಕ್ಕೂ ಮಿಕ್ಕಿದ ಅರ್ಹ ಬೀದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕುಗಳಿಂದ ಸಾಲ ದೊರೆಯುವಂತೆ ನೋಡಿಕೊಳ್ಳಲಾಗಿದೆ.

ಈ ಯೋಜನೆಯ ವ್ಯವಸ್ಥಿತ ನಿರ್ವಹಣೆಯಲ್ಲಿ ಪಾಲಿಕೆ ರಾಜ್ಯದಲ್ಲೇ ಮಂಚೂಣಿಯಲ್ಲಿದೆ ಎಂದರು. ಯೋಜನೆಯ ವಿವರ ನೀಡಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಂದ್ರಪ್ಪ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಈ ಸಾಲ ಮೇಳದ ಮೂಲಕ ಜನಸಾಮಾನ್ಯರೊಂದಿಗಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದರು.ಇನ್ನೂ ಈ ಒಂದು ಮೇಳದಲ್ಲಿ ಸ್ಥಳದಲ್ಲೇ 100 ಬೀದಿ ವ್ಯಾಪಾರಿಗಳಿಗೆ ಸಾಲ ವಿತರಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಹಾಪ್ರಬಂಧಕ ಚಂದ್ರಶೇಖರ ಡಿ ಮೋರೊ, ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣರಾಜ ಅಡಿಗ ಮತ್ತು ಹು- ಧಾ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಕೆವಿಜಿ ಬ್ಯಾಂಕ್ ನ ಸಾರ್ವಜನಿಕರ ಅಧಿಕಾರಿ ಉಲ್ಲಾಸ ಗುಣಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.