ಗ್ಲೆನ್ ಮ್ಯಾಕ್ಸ್‌ವೆಲ್ ಗೆ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮೂಲಬೆಲೆ ₹2ಕೋಟಿಯಾಗಿದ್ದು, ಕಳೆದ ಬಾರಿ ₹10.75 ಕೋಟಿಗೆ ಪಂಜಾಬ್ ತಂಡದ ಪಾಲಾಗಿದ್ದರು.
ಆದರೆ, ಈ ವರ್ಷ ಪಂಜಾಬ್ ತಂಡವು ಮ್ಯಾಕ್ಸ್‌ವೆಲ್ ಅವರನ್ನು ಕೈಬಿಟ್ಟಿದ್ದು, ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಊಹಿಸದ ರೀತಿಯಲ್ಲಿ ಬೇಡಿಕೆ ವ್ಯಕ್ತವಾಗಿ ₹14.25 ಕೋಟಿ ಗೆ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ. ಕಳೆದ ಬಾರಿ ಪಂಜಾಬ್ ತಂಡದಲ್ಲಿ ನೀರಸ ಪ್ರದರ್ಶನ ತೋರಿದ್ದ ಮ್ಯಾಕ್ಸ್‌ವೆಲ್ ನಂತರ ಆಸ್ಟ್ರೇಲಿಯಾದಲ್ಲಿ ಆಡುವಾಗ ಅಬ್ಬರಿಸಿದ್ದರು. ಅವರ ಈ ಪ್ರದರ್ಶನವೇ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ.
ಜೊತೆಗೆ, ಸ್ವತಃ ಮ್ಯಾಕ್ಸ್‌ವೆಲ್ RCB ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದರಿಂದ ಅವರನ್ನು ಬೆಂಗಳೂರು ತಂಡ ಖರೀದಿಸಬಹುದು ಎಂಬ ಮಾತುಗಳು ಹರಿದಾಡುತ್ತಿದ್ದವು. ಮ್ಯಾಕ್ಸ್‌ವೆಲ್ ಅವರನ್ನು ಕೊಂಡ ನಂತರ RCB ಖಾತೆಯಲ್ಲಿ ₹21.15 ಕೋಟಿ ಉಳಿದುಕೊಂಡಿದೆ. ಆರಂಭ ದಿಂದಲೂ ಚೆನ್ನೈ ಮತ್ತು RCB ಮಧ್ಯೆ ಭಾರೀ ಪೈಪೋಟಿ ನಡೆದಿತ್ತು.
ಕೊನೆಯ ಹಂತದವರೆಗೂ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಲು CSK ಆಸಕ್ತಿ ತೋರಿಸುತ್ತಲೇ ಬಂದಿತಾದರೂ ಕೊನೆಯಲ್ಲಿ ಬೆಂಗಳೂರು ತಂಡ ಪಣತೊಟ್ಟು ತನ್ನ ತೆಕ್ಕೆಗೆ ತೆಗೆದುಕೊಂಡಿತು.