ಧಾರವಾಡ –
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ
ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ ಚಾಲಕ ಮತ್ತು ನಿರ್ವಾಹಕ.ಹೌದು ಇಂಥಹದೊಂದು ಪ್ರಾಮಾಣಿಕತೆಯೊಂದು ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ.
ಅಥಣಿ ಮೂಲದ ನಗರದ ಗೋಕುಲ ರಸ್ತೆಯ ಡಾಲರ್ಸ್ ಕಾಲನಿ ನಿವಾಸಿ ಮನೋಜ ಎಂಬುವರು
ರವಿವಾರ ಕಾರ್ಯ ನಿಮಿತ್ತ ಬೆಳಗಾವಿಗೆ ಹೋಗಿದ್ದರು. ಅಲ್ಲಿಂದ ರಾತ್ರಿ ಹುಬ್ಬಳ್ಳಿಗೆ ವಾಯವ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಿದ್ದಾರೆ. ಮರುದಿನ ಬೆಳಿಗ್ಗೆ ಕತ್ತಿನಲ್ಲಿದ್ದ ಚಿನ್ನದ ಸರ ಕಾಣದಿರುವ ಬಗ್ಗೆ ಅವರ ಪತ್ನಿ ಪ್ರಶ್ನಿಸಿದಾಗಲೇ ಸರ ಕಳೆದಿರುವುದು ಅರಿವಿಗೆ ಬಂದಿದೆ. ಕಳೆದುಕೊಂಡದ್ದು ಸಣ್ಣಪುಟ್ಟ ವಸ್ತುವಲ್ಲ.ಬರೋಬ್ಬರಿ 12 ಗ್ರಾಂ ಚಿನ್ನದ ಸರ ಗಾಬರಿಗೊಂಡು ಕೂಡಲೆ ತಮ್ಮ ಬಸ್ ಟಿಕೆಟ್ ಹಿಡಿದುಕೊಂಡು ಬಸ್ ಡಿಪೋ ಗೆ ಧಾವಿಸಿದ್ದಾರೆ.
ಇತ್ತ ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಾಂತರ 3ನೇ ಘಟಕದ ಕೆ.ಎ. 25 ಎಫ್ 3200 ಸಂಖ್ಯೆಯ ತಡೆರಹಿತ ಸಾರಿಗೆ ಬಸ್ಸಿನಲ್ಲಿ ಚಾಲಕರಾಗಿ ಕೆ.ಎಂ.ಹವಾಲ್ದಾರ ಹಾಗೂ ನಿರ್ವಾಹಕರಾಗಿ ಪಿ.ಎಚ್.ಚವ್ಹಾಣ ಬೆಳಿಗ್ಗೆಯಿಂದ ಹುಬ್ಬಳ್ಳಿ- ಬೆಳಗಾವಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರಾತ್ರಿ 8ಕ್ಕೆ ಕೊನೆಯ ಟ್ರಿಪ್ ನಲ್ಲಿ ಬೆಳಗಾವಿಯಿಂದ ಹೊರಟು ರಾತ್ರಿ 10ಕ್ಕೆ ಹುಬ್ಬಳ್ಳಿಗೆ ಬಂದಿದ್ದಾರೆ.
ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ. ಬಸ್ಸನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ನಿರ್ವಾಹಕ ತನ್ನ ಪಕ್ಕದ ಆಸನದ ಕೆಳಗೆ ಚಿನ್ನದ ಸರ ಇರುವುದನ್ನು ಗಮನಿಸಿದ್ದಾರೆ.ಕೂಡಲೆ ಸಹೋದ್ಯೋಗಿ ಚಾಲಕರಿಗೆ ತಿಳಿಸಿದ್ದಾರೆ. ಇಬ್ಬರೂ ಸೇರಿ ಚಿನ್ನದ ಸರವನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮ ಚಿನ್ನದ ಸರವನ್ನು ಚಾಲಕ- ನಿರ್ವಾಹಕರ ಮೂಲಕ ವಾರಸುದಾರರಿಗೆ ಮರಳಿಸಲಾಯಿತು.
ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕ ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಇವರ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ ಮತ್ತು ಸಾರ್ವಜನಿಕರ ವಲಯದಲ್ಲಿ ಸಂಸ್ಥೆಯ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಆಡಳಿತಾಧಿಕಾರಿನಾಗಮಣಿ, ನಿಲ್ದಾಣಾಧಿಕಾರಿ ಪಿ.ಎಸ್.ಶೆಟ್ಟರ ಮತ್ತಿತರರು ಈ ಒಂದು ಕಾರ್ಯಕ್ರಮದಲ್ಲಿ ಇದ್ದರು