ಧಾರವಾಡ –
ಮಹಾರಾಷ್ಟ್ರದ ಥಾಣೆಯಿಂದ ಚೆನ್ನೈವರೆಗಿನ 1235 ಕಿ.ಮೀ ಉದ್ದದ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ 29.04 ಕಿ.ಮೀ. ಉದ್ದನೆಯ ರಸ್ತೆ ಮಾತ್ರ ಕಿರಿದಾದ ರಸ್ತೆಯಾಗಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆ ನಿರ್ಮಿಸಿರುವ ಈ ರಸ್ತೆ ಇಲ್ಲಿಯವರೆಗೂ 450 ಹೆಚ್ಚು ಜನರ ಬಲಿ ಪಡೆದಿದ್ದು ಕೂಡಲೇ ಇದನ್ನು ವಿಸ್ತರಿಸುವಂತೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಬೈಪಾಸ್ ರಸ್ತೆಗೆ ಪ್ರಸಕ್ತ ಸಂಚಾರ ದಟ್ಟಣೆ ಲಕ್ಷದಲ್ಲಿಟ್ಟುಕೊಂಡಲ್ಲಿ ಅಷ್ಟಪಥ ರಸ್ತೆ ಅನಿವಾರ್ಯವಾಗಿದೆ. ಅದನ್ನು ರಾಷ್ಟ್ರೀಯ ಹೆದ್ದಾರಿ 48ಕ್ಕೆ ಜೋಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ರಸ್ತೆ ಮಾತ್ರ ದ್ವಿಪಥವಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಸಾವಿರಾರು ವಾಣಿಜ್ಯ ವಾಹನಗಳ ಚಲನೆಯಿಂದಾಗಿ ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದ್ದು ಜ. 15 ರಂದು ಟೆಂಟೊ ಟ್ರಾವೆಲರ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಜನ ಮೃತಪಟ್ಟಿರುವುದು ಇಲ್ಲಿನ ವಾಸ್ತವತೆಗೆ ಕೈಗನ್ನಡಿಯಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಆದ್ಯತೆ ಮೇಲೆ ಈ ರಸ್ತೆ ವಿಸ್ತರಣೆಗೆ ಕ್ರಮಕೈಗೊಳ್ಳದೆ ಹೊದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಪಘಾತ ವಲಯ ಎಂದು ಇಲ್ಲಿ ಫಲಕ ಹಾಕಲಾಗಿದೆ. ಆದರೂ, ಅಪಘಾತ ಸಂಭವಿಸಿದಾಗಷ್ಟೇ ಚರ್ಚೆಯ ಮುನ್ನೆಲೆಗೆ ಬರುವ ಬೈಪಾಸ್ ವಿಸ್ತರಣೆ ಮತ್ತೊಂದು ಅಪಘಾತದವರೆಗೂ ಗೌಣವಾಗುತ್ತದೆ. ಪ್ರಯಾಣಿಕರು ಮಾತ್ರ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಶೀಘ್ರ ವಿಸ್ತರಣೆ ಮಾಡಬೇಕು ಇಲ್ಲವಾದರೆ ಹೋರಾಟವನ್ನು ಮಾಡಲಾಗುತ್ತದೆ ಎಂದು ಒತ್ತಾಯಿಸಿ ಎಚ್ಚರಿಕೆ ನೀಡಿದ್ದಾರೆ.