ಬಾಲಮಂದಿರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ.ಮಕ್ಕಳಿಗೆ ಕೈ ತುತ್ತು ನೀಡಿ ಊಟ ಮಾಡಿಸಿ, ಬಾಲಮಂದಿರದಲ್ಲಿ ವಾಸ್ತವ್ಯ ಮಾಡಿದ ಸಚಿವರು
ಹುಬ್ಬಳ್ಳಿ –
ಹೌದು ಇಂಥದೊಂದು ವಿಶೇಷವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಕಂಡು ಬಂದಿದ್ದು ಹುಬ್ಬಳ್ಳಿಯ ಮನೋ ವಿಕಾಸ ಬಾಲ ಮಂದಿರ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೋಲ್ಲೆ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಮಾದರಿಯಾದರು.ತಾವೊಬ್ಬರು ಸಚಿವೆ ತಮ್ಮ ಪತಿ ಸಂಸದರು ಎಂದುಕೊಂಡು ಹೈ ಪೈ ರೀತಿಯಲ್ಲಿ ಬರ್ಥಡೆ ಮಾಡಿಕೊಳ್ಳದೇ ವಿಶೇಷ ರೀತಿಯಲ್ಲಿ ಮಾಡಿಕೊಂಡು ಹೆಸರಿನ ವ್ಯಕ್ತಿತ್ವದ ಹಾಗೇ ಮಾದರಿಯಾದರು.

ಇನ್ನೂ ಮನೋವಿಕಲ ಹಾಗೂ ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಹೊಸ ಕಾರ್ಯಕ್ರಮಗಳನ್ನು ರೂಪಿಸಿ,ಜಾರಿಗೊಳಿಸುತ್ತಿದೆ. ಉಣಕಲ್ಲಿನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರ ನಾಡಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಣಕಲ್ಲ್ ನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಇಂದು ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಮಕ್ಕಳು ನಿರ್ಮಿಸಿದ ಕುಶಲ ಕಲಾ ವಸ್ತುಗಳನ್ನು, ಚಟುವಟಿಕೆಗಳನ್ನು ವೀಕ್ಷಿಸಿದರು.

ಮಾತನಾಡಿ ಇಂದು ನನ್ನ ಜೀವನದ ಚಿರಸ್ಮರಣೀಯ ಕ್ಷಣವಾಗಿದೆ, ಸಾಮಾನ್ಯ ಆರೋಗ್ಯವಂತ ಮಗು ಜನಿಸಿದಾಗ ಮನೆಯಲ್ಲಿ ನಿರ್ಮಾಣವಾಗುವ ಸಂತಸದ ವಾತಾವರಣವೇ ಬೇರೆ, ಆದರೆ ಮನೋವಿಕಲ ಅಥವಾ ವಿಕಲಚೇತನ ಮಕ್ಕಳು ಜನಿಸಿದಾಗ ಎದುರಾಗುವ ಸನ್ನಿವೇಶವೇ ಬೇರೆಯಾಗಿರುತ್ತದೆ, ತಮಗೆ ಸ್ವತಃ ಅದರ ಅನುಭವವಿದೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಈ ವಿಶೇಷ ಚೇತನ ಮಕ್ಕಳಿಗೆ ಪ್ರೀತಿ ತೋರಬೇಕು. ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲಮಂದಿರಗಳ ಮೂಲಕ ಈ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಶ್ರಮಿಸುತ್ತಿದೆ ಎಂದರು.

ಉಣಕಲ್ಲಿನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಪರಿವರ್ತನೆ,ಸುಧಾರಣೆಗಳಾಗಿವೆ.ಕೋವಿಡ್ ಹಿನ್ನೆಲೆಯಲ್ಲಿ ಇದರ ಬಗ್ಗೆ ವ್ಯಾಪಕ ಮಾಹಿತಿ ನೀಡಲು ಸಾಧ್ಯವಾಗಿಲ್ಲ ಇನ್ನು ಮುಂದೆ ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದರು.

ಆಕಾಶಬುಟ್ಟಿ ಹಾರಿಸಿ,ಕೈತುತ್ತು ತಿನ್ನಿಸಿ ,ಉಡುಗೊರೆ ನೀಡಿ ಪ್ರೀತಿ ತೋರಿದ ಸಚಿವರು:

ಎಸ್ ಮನೋವಿಕಲ ಮಕ್ಕಳಿಗೆ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಕೈಗಳಿಂದ ತುತ್ತು ನೀಡಿ ಊಟ ಮಾಡಿಸಿದರು, ಸಚಿವರಲ್ಲಿ ಮಾತೃ ಮಮತೆ ಕಂಡ ಬಾಲಕಿಯರು ಭಾವುಕರಾಗಿ ಆನಂದಬಾಷ್ಪ ಸುರಿಸಿದರು. ಬಾಲಮಂದಿರದಲ್ಲಿರುವ ಎಲ್ಲಾ 47 ಮಕ್ಕಳಿಗೆ ಬಟ್ಟೆ ,ಸಿಹಿ ಖಾದ್ಯಗಳನ್ನು ನೀಡಿದರು.

ಅವರೊಂದಿಗೆ ಬೆರೆತು ಆಕಾಶ ಬುಟ್ಟಿಯನ್ನು ಬಾನಂಗಳಕ್ಕೆ ಹಾರಿ ಬಿಟ್ಟು ತಮ್ಮ ಪ್ರೀತಿ,ಸಂತಸ ಹಂಚಿಕೊಂಡರು. ಬಾಲಮಂದಿರದಲ್ಲಿಯೇ ಮಕ್ಕಳೊಂದಿಗೆ ರಾತ್ರಿ ವಾಸ್ತವ್ಯ ಮಾಡಿದರು.ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಹೆಚ್.ಲಲಿತಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್.ಮೂಲಿಮನಿ ಮತ್ತಿತರರು ಉಪಸ್ಥಿತರಿದ್ದರು.