ಹುಬ್ಬಳ್ಳಿ – ಜಗತ್ತು ವೈಜ್ಞಾನಿಕ ಪ್ರಗತಿಯತ್ತ ಸಾಗುತ್ತಿದೆ. ತಂತ್ರಜ್ಞಾನದ ಮೂಲಕ ಶೈಕ್ಷಣಿಕ ವ್ಯವಸ್ಥೆ ಅಭಿವೃದ್ದಿ ಹೊಂದುತ್ತಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ವೈಜ್ಞಾನಿಕ ಮನೋಭಾವನೆ ಕೂಡ ಬೆಳಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಯಯ್ಯ ಹೇಳಿದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಾ ಮಟ್ಟದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಸರಕಾರಿ ಪ್ರೌಢ ಮಕ್ಕಳಿಗೆ ಲ್ಯಾಪ್‍ಟಾಪ್‍ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಉನ್ನತ ಮಟ್ಟದ ಶಿಕ್ಷಣಕ್ಕೆ ಪ್ರೌಢಶಾಲಾ ಶಿಕ್ಷಣ ಅಡಿಪಾಯ. ಸರ್ಕಾರಿ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ. ಉಪ ಜೀವನಕ್ಕಾಗಿ ಕಾರು ಚಾಲನೆ, ಆಟೋ ಮ್ಯಾಕಾನಿಕ್, ಟೈಲರಿಂಗ್ ವೃತ್ತಿ ಮಾಡುತ್ತಿರುವರ ಮಕ್ಕಳು ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ ಎಂದರು.
ನೇಕಾರನಗರದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಪವಾರ, ಸದಾಶಿವನಗರದ ಸರಕಾರಿ ಉರ್ದು ಪ್ರೌಢ ಶಾಲೆ ವಿದ್ಯಾರ್ಥಿನಿ ಸುಮಯ್ಯಾ, ಸರಕಾರಿ ಪ್ರೌಢಶಾಲೆ ಪೆಂಡಾರಗಲ್ಲಿಯ ವಿದ್ಯಾರ್ಥಿನಿ ಕುಮಾರಿ ಗೌರಿ ಪಾಸ್ತೆ ಅನುಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ಇವರನ್ನು ಸನ್ಮಾನಿಸಿದ ಶಾಸಕ ಅಬ್ಬಯ್ಯ ಪ್ರಸಾದ್
ವೈಯಕ್ತಿಕವಾಗಿ ತಲಾ ಒಂದು ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡಿದರು.
ಬಿ.ಇ.ಓ ಎಸ್.ಸಿ ಕರೀಕಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್. ಶಿವಳ್ಳಿಮಠ, ಇ.ಸಿ.ಓ ಗಳಾದ ಲೋಕೇಶ್ ಡಿ, ಪ್ರಭಾಕರ ಜಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.