ಬೆಂಗಳೂರು -
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣಾ ಯೋಜನೆಗೆ ಅನುದಾನದ ಸಮಸ್ಯೆ ಎದುರಾಗಿದ್ದು ಡಿ.1ರಿಂದಲೇ ವಿತರಣೆ ಸ್ಥಗಿತಗೊಳ್ಳುವ ಆತಂಕ ಶುರುವಾಗಿದೆ.ಕಳೆದ 4 ತಿಂಗಳಿಂದ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಅನುದಾನ ಬಿಡುಗಡೆ ಯಾಗದ ಪರಿಣಾಮ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಒದಗಿಸಲು ಮುಖ್ಯಶಿಕ್ಷಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡುವ ಅನಿವಾರ್ಯತೆ ಉಂಟಾಗಿದೆ.
ಆರಂಭದಲ್ಲಿ ಸ್ವಂತ ಹಣ ಬಳಸಿದ ಶಿಕ್ಷಕರು ಬಳಿಕ ಅಂಗಡಿಗಳಿಂದ ಸಾಲ ಪಡೆದು ಮಕ್ಕಳಿಗೆ ಆಹಾರ ಒದಗಿಸಿದ್ದಾರೆ.ತಿಂಗಳುಗಟ್ಟಲೆ ಬಾಕಿ ಹಣ ಪಾವತಿ ಯಾಗದ ಹಿನ್ನೆಲೆಯಲ್ಲಿ ಪೂರೈಕೆದಾರರೂ ಇನ್ನು ಸಾಲ ನೀಡಲು ಆಗಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಒಂದೆಡೆ ಸಾಲದ ಒತ್ತಡಕ್ಕೆ ಸಿಲುಕಿ ದ್ದರೆ,ಮತ್ತೊಂದೆಡೆ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ರಾಜ್ಯ ದಲ್ಲಿ ಸರ್ಕಾರಿ ಹಾಗೂ ಅನುದಾನಿತ ಸೇರಿ ಸುಮಾರು 55,749 ಶಾಲೆಗಳಿದ್ದು, 1ರಿಂದ 10ನೇ ತರಗತಿವರೆಗಿನ ಅಂದಾಜು 52.55 ಲಕ್ಷ ವಿದ್ಯಾರ್ಥಿ ಗಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾ ಗುತ್ತಿದೆ ಈ ಹಿಂದೆ ವಾರದಲ್ಲಿ 2 ದಿನ ಮಾತ್ರ ಸರ್ಕಾರ ದಿಂದ ಈ ಸೌಲಭ್ಯ ಕಲ್ಪಿಸಲಾಗುತ್ತಿತ್ತು 2024ರಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಮಾಡಿಕೊಂಡ ಒಪ್ಪಂದದ ಬಳಿಕ ವಾರದಲ್ಲಿ 6 ದಿನ ವಿತರಣೆ ವ್ಯವಸ್ಥೆ ಜಾರಿಯಲ್ಲಿದೆ. ಇದರಲ್ಲಿ 2 ದಿನದ ವೆಚ್ಚವನ್ನು ಸರ್ಕಾರ ಹಾಗೂ 4 ದಿನದ ವೆಚ್ಚವನ್ನು ಫೌಂಡೇಶನ್ ಭರಿಸುತ್ತಿದೆ. ಕೆಲವೆಡೆ ಅನುದಾನ ಬಳಕೆಯಲ್ಲಿ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಜೀಂ ಪ್ರೇಮ್‌ಜೀ ಫೌಂಡೇಷನ್ ಅನುದಾನ ಸ್ಥಗಿತಗೊಳಿಸಿದೆ ಎನ್ನಲಾಗಿದೆ.
ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಫೌಂಡೇಶನ್ ಪಾಲಿನ ಅನುದಾನ ಶಾಲೆಗಳ ಖಾತೆಗೆ ಜಮೆಯಾಗಿಲ್ಲ. ಆರಂಭದಲ್ಲಿ ಲಭ್ಯವಿದ್ದ ಹಣದಲ್ಲೇ ವ್ಯವಸ್ಥೆ ನಿಭಾಯಿಸಿದ ಮುಖ್ಯಶಿಕ್ಷಕರು, ಬಳಿಕ ಸ್ಥಳೀಯ ಅಂಗಡಿಗಳಿಂದ ಸಾಲ ಪಡೆದು ಮೊಟ್ಟೆ, ಬಾಳೆಹಣ್ಣು ಖರೀದಿಸಿದ್ದಾರೆ. ಆದರೆ, ಬಾಕಿ ಮೊತ್ತ ಹೆಚ್ಚಾಗುತ್ತಿದ್ದಂತೆ ಪೂರೈಕೆದಾರರು ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಶಾಲೆಗಳಲ್ಲಿ ವಿತರಣೆ ಮುಂದುವರಿಸುವುದು ಕಷ್ಟಕರವಾಗಿದೆ.
ಡಿ.1ರಿಂದ ಸ್ಥಗಿತ ಎಚ್ಚರಿಕೆ: ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಶಿಕ್ಷಕರು ಶಾಲಾ ಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಗಮನಕ್ಕೆ ತಂದಿದ್ದು, ಆಯಾ ತಾಲೂಕುಗಳ ಅಕ್ಷರ ದಾಸೋಹ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಜುಲೈನಿಂದ ಅಕ್ಟೋಬರ್‌ವರೆಗಿನ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಮುಂದಿನ ತಿಂಗಳುಗಳಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ಖರೀದಿಸಲು ಅಗತ್ಯ ವಿರುವ ಅನುದಾನವನ್ನು ಮುಂಗಡವಾಗಿ ಒದಗಿ ಸಬೇಕು. ಅನುದಾನ ಬಿಡುಗಡೆ ಹಾಗೂ ಖರೀದಿಗೆ ಅಗತ್ಯ ಹಣಕಾಸಿನ ವ್ಯವಸ್ಥೆ ಕಲ್ಪಿಸದಿದ್ದರೆ ಡಿ.1ರಿಂದ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಅನಿವಾರ್ಯ ವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೊಟ್ಟೆ, ಬಾಳೆಹಣ್ಣು ವಿತರಣೆಯ ಅನುದಾನ ಪಾವತಿ ವಿಳಂಬದಿಂದ ಸಮಸ್ಯೆ ಎದುರಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ಇದೆ. ಸರ್ಕಾರದ ಪಾಲಿನ ಬಾಕಿ ಅನುದಾನ ಪಾವತಿಯಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನದಲ್ಲಿ ವ್ಯತ್ಯಾಸವಿದ್ದು, ಕೊರತೆ ನೀಗಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಮನವಿಯನ್ನೂ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುದಾನ ಬಿಡುಗಡೆಯಾಗುವ ಭರವಸೆ ಸಿಕ್ಕಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಒಂದು ವೇಳೆ ಅನುದಾನ ಬಿಡುಗಡೆಯಾಗದಿದ್ದರೆ ವಿತರಣೆಯಲ್ಲಿ ಸಹಜವಾಗಿಯೇ ವ್ಯತ್ಯಯ ಉಂಟಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....