ಬೆಂಗಳೂರು -
ರಾಜ್ಯ ಸರ್ಕಾರಿ ನೌಕರ'ರಿಗೆ 'OPS' ಜಾರಿ ಕುರಿತಂತೆ 'ಕರ್ನಾಟಕ ಹೈಕೋರ್ಟ್' ಮಹತ್ವದ ತೀರ್ಪು ನೀಡಿದೆ ಹೌದು ಒಂದು ಸರ್ಕಾರಿ ಅಥವಾ ಸ್ವಾಯತ್ತ ಸಂಸ್ಥೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು 'ತಾಂತ್ರಿಕ ರಾಜೀನಾಮೆ' ನೀಡುವ ಮೂಲಕ ಮತ್ತೊಂದು ಸರ್ಕಾರಿ ಸ್ವಾಯತ್ತ ಸಂಸ್ಥೆಗೆ ನೇಮಕಗೊಂಡ ನೌಕರರು 'ಹಳೆಯ ಪಿಂಚಣಿ ಯೋಜನೆ' ಪಡೆಯಲು ಸಂಪೂರ್ಣ ಅರ್ಹರಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ .
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಎಂ.ಎಸ್. ಸಿದ್ದೇಗೌಡ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು (WP No. 22644 of 2024) ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.ಡಾ. ಎಂ.ಎಸ್. ಸಿದ್ದೇಗೌಡ ಅವರು 1994ರ ಜನವರಿ 25ರಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದ್ದರು. ಬಳಿಕ 2005ರಲ್ಲಿ ಕಿದ್ವಾಯಿ ಸಂಸ್ಥೆಯಿಂದ ಅಧಿಕೃತ ಅನುಮತಿ ಪಡೆದು,ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (MIMS) ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಅದರಂತೆ 2006ರ ಫೆಬ್ರವರಿ 24ರಂದು ನೇಮಕಾತಿ ಆದೇಶ ಪಡೆದು, ಅಕ್ಟೋಬರ್ 31, 2006ರಂದು ಮಂಡ್ಯ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು 2023ರ ಸೆಪ್ಟೆಂಬರ್ 30ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿದ ಬಳಿಕ, ತಾವು 2006ರ ಮಾರ್ಚ್ 31ಕ್ಕಿಂತ ಮೊದಲೇ ಸರ್ಕಾರಿ ಸೇವೆಗೆ ಸೇರಿದ್ದರಿಂದ ಮತ್ತು ನಿಯಮಾನುಸಾರ ತಾಂತ್ರಿಕ ರಾಜೀನಾಮೆ ನೀಡಿ ವರ್ಗಾವಣೆಗೊಂಡಿರುವು ದರಿಂದ ತಮಗೆ ಹಳೆಯ ಪಿಂಚಣಿ ಯೋಜನೆಯ (OPS) ಸೌಲಭ್ಯ ನೀಡುವಂತೆ ಕೋರಿದ್ದರು.
ಆದರೆ 2006ರ ಏಪ್ರಿಲ್ 1ರ ನಂತರ ಹೊಸ ಸಂಸ್ಥೆಗೆ ಸೇರಿದ್ದಾರೆ ಎಂಬ ಕಾರಣ ನೀಡಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2024ರ ಜೂನ್ 18ರಂದು ಹಿಂಬರಹ (Endorsement) ನೀಡಿ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSRs) ನಿಯಮ 252(b) ಅನ್ನು ಉಲ್ಲೇಖಿಸಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಒಂದು ಸರ್ಕಾರಿ ಸಂಸ್ಥೆಯಿಂದ ಮತ್ತೊಂದು ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗೆ ಸೇರಲು ನೀಡುವ ರಾಜೀನಾಮೆಯನ್ನು 'ತಾಂತ್ರಿಕರಾಜೀನಾಮೆ' ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.
ಇದು ಸಾಮಾನ್ಯ ರಾಜೀನಾಮೆಯಂತಲ್ಲದೆ ಸೇವಾ ನಿರಂತರತೆಯನ್ನು ಕಾಪಾಡುತ್ತದೆ. ಅರ್ಜಿದಾರರು 2006ರ ಅಕ್ಟೋಬರ್‌ನಲ್ಲಿ ಹೊಸ ಸಂಸ್ಥೆಗೆ ಸೇರಿ ದ್ದರೂ, ಅವರ ಮೂಲ ಸೇವೆ 1994ರಲ್ಲೇ ಆರಂಭ ವಾಗಿದೆ. ಹೀಗಾಗಿ 2006ರ ಏಪ್ರಿಲ್ 1ರ ನಂತರ ಸೇವೆಗೆ ಸೇರಿದವರಿಗೆ ಅನ್ವಯವಾಗುವ ಹೊಸ ಪಿಂಚಣಿ ಯೋಜನೆಯ (NPS) ಕಟ್-ಆಫ್ ದಿನಾಂಕದ ನಿಯಮವನ್ನು ಇವರಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಅರ್ಜಿದಾರರು ಈ ಹಿಂದೆ ಭವಿಷ್ಯ ನಿಧಿ ಆಯ್ಕೆ ಮಾಡಿಕೊಂಡಿದ್ದರು ಎಂಬ ಪ್ರತಿವಾದಿಗಳ ವಾದ ವನ್ನೂ ತಳ್ಳಿಹಾಕಿದ ನ್ಯಾಯಾಲಯ, ಅಂತಹ ಯಾವುದೇ ಪ್ರತ್ಯೇಕ ಯೋಜನೆ ಚಾಲ್ತಿಯಲ್ಲಿರಲಿಲ್ಲ ಎಂಬುದನ್ನು ಗಮನಿಸಿತು. ಅಲ್ಲದೆ, ಈ ಹಿಂದೆ ಹೈಕೋರ್ಟ್ ನೀಡಿದ್ದ 'ಎಚ್.ಕೆ. ಸಿದ್ದಲಿಂಗಮೂರ್ತಿ ವರ್ಸಸ್ ಕರ್ನಾಟಕ ಸರ್ಕಾರ' ಪ್ರಕರಣದ ತೀರ್ಪು ಹಾಗೂ 2007ರ ಜುಲೈ 12ರ ಸರ್ಕಾರದ ಅಧಿಕೃತ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ಅರ್ಜಿದಾರರ ವಾದವನ್ನು ಎತ್ತಿಹಿಡಿಯಿತು ಅಂತಿಮವಾಗಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2024ರ ಜೂನ್ 18ರಂದು ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದ ಹೈಕೋರ್ಟ್, ಆದೇಶದ ಪ್ರತಿ ತಲುಪಿದ ತಕ್ಷಣವೇ ಅರ್ಜಿದಾರರಿಗೆ ಹಳೆಯ ಪಿಂಚಣಿ ಯೋಜನೆಯಡಿ (OPS) ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....