ಕೋಲಾರ -
ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ದಾಳಿ ನಡೆಸಿ 406 ಕಡತಗಳನ್ನು ವಶಕ್ಕೆ ಪಡೆದಿದ್ದ ಪ್ರಕರಣದಲ್ಲಿ ಕೋಲಾರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಭೂಮಾಪನ ಇಲಾಖೆ ತಪಾಸಣಾಧಿಕಾರಿ ಜಿ.ಸುರೇಶ್ ಬಾಬು ಅವರನ್ನು ಅಮಾನತುಗೊಳಿಸಿ ಬೆಂಗಳೂರಿನ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ ಕರ್ತವ್ಯ ಲೋಪದ ಆರೋಪ ಹಾಗೂ ಸದ್ಯ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಲಾಗಿದೆಲೋಕಾಯುಕ್ತ ಹಾಗೂ ಇಲಾಖಾ ಪ್ರಕರಣದಲ್ಲಿ ಪೂರ್ಣ ಸಹಕಾರ ನೀಡುವಂತೆ ಸೂಚಿಸಲಾಗಿದೆ.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂ ದಾಖಲೆಗಳ ಉಪನಿರ್ದೇಶಕರ (ಡಿಡಿಎಲ್‌ಆರ್) ಕಚೇರಿಯಲ್ಲಿ ತಪಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಈ ಹಿಂದೆ ಕೋಲಾರ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿನ ಅಕ್ರಮಗಳ ಆರೋಪ ಸಂಬಂಧ ಈ ಕ್ರಮ ಜರುಗಿಸಿರುವುದು ಗೊತ್ತಾಗಿದೆ.ಈ ಸಂಬಂಧ ಕೋಲಾರ ಲೋಕಾಯುಕ್ತ ಪೊಲೀಸ್ ಅಧೀಕ್ಷರು ಕೋಲಾರದ ಭೂದಾಖಲೆಗಳ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರು.
ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ಅಗ್ರಹಾರ ಸೋಮರಸನಹಳ್ಳಿ ಮತ್ತು ನರಸಾಪುರ ಹೋಬಳಿಯ ರಾಮಸಂದ್ರ ಗ್ರಾಮಗಳ ದರಖಾಸ್ತು ಪೋಡಿ ಹಾಗೂ ಮಂಜೂರಾತಿ ಪ್ರಕರಣಗಳಿಗೆ ಸಂಬಂಧಿಸಿದ ಮೂಲ ಕಡತಗಳನ್ನು ಸ್ವೀಕರಿಸಿದ್ದ ಸುರೇಶ್ ಬಾಬು ಅವುಗಳ ಟಿಪ್ಪಣಿ, ಆಕಾರಬಂದ್, ಪೋಡಿ ಸ್ಕೆಚ್ ಹಾಗೂ ಹದ್ದುಬಸ್ತು ದಾಖಲೆಗಳನ್ನು ನಿಯಮಾನುಸಾರ ಕಚೇರಿಯಲ್ಲಿ ಸಂರಕ್ಷಿಸಿರಲಿಲ್ಲ. ಕಡತಗಳ ಚಲನವಲನ ವಹಿಯಲ್ಲಿ ನಮೂದಿಸದೇ ಮೂಲ ದಾಖಲೆಗಳನ್ನು ಕಚೇರಿಯಿಂದ ಹೊರಗೆ ಖಾಸಗಿ ವ್ಯಕ್ತಿಗಳ ಕೈಗೆ ಸಿಗುವಂತೆ ಮಾಡಿ ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಲೋಕಾಯುಕ್ತರು ದಾಳಿ ನಡೆಸಿದಾಗ ಈ ಕಡತಗಳು ಬೇರೆಡೆ ಪತ್ತೆಯಾಗಿದ್ದವು.ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ-1957ರ ನಿಯಮ 10(1)(ಎ) ರಡಿ ಇಲಾಖೆ ಆಯುಕ್ತ ವೆಂಕಟ್ ರಾಜಾ ಈ ಅಮಾನತು ಆದೇಶ ಹೊರಡಿಸಿದ್ದಾರೆ ವಿಚಾರಣೆ ಮೇಲೆ ಪ್ರಭಾವ ಬೀರುವುದನ್ನು ತಡೆಯುವ ಉದ್ದೇಶದಿಂದ ಅಮಾನತು ಅವಧಿಯಲ್ಲಿ ಅವರ ಹುದ್ದೆಯ ಮೇಲಿನ ಹಕ್ಕನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಕಾರವಾರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದು ಹಾಗೂ ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಆದೇಶದಲ್ಲಿ ಸೂಚಿಸಿದ್ದಾರೆ ಕೋಲಾರ ಲೋಕಾಯುಕ್ತ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿ ಏಕರಾಜಪುರ ಗ್ರಾಮದಲ್ಲಿರುವ ಸುರೇಶ್ ಬಾಬು ಅವರ ಸಂಬಂಧಿಕರ ಫ್ಯಾಕ್ಟರಿ ಕಚೇರಿಯ ಮೇಲೆ ಕಾರ್ಯಾಚರಣೆ ನಡೆಸಿದ್ದ ವೇಳೆ, ಕೋಲಾರ ಜಿಲ್ಲಾಧಿಕಾರಿ ಕಚೇರಿ, ಡಿಡಿಎಲ್‌ಆರ್, ಎಡಿಎಲ್‌ಆರ್, ಉಪವಿಭಾಗಾಧಿಕಾರಿ ಹಾಗೂ ವಿವಿಧ ತಾಲೂಕು ಕಚೇರಿಗಳಿಗೆ ಸೇರಿದ 66 ಮೂಲ ಕಡತ, 249 ನಕಲು ಕಡತ ಸೇರಿದಂತೆ ಒಟ್ಟು 406 ಕಡತಗಳು ಅಕ್ರಮವಾಗಿ ಪತ್ತೆಯಾಗಿದ್ದವು.
ಸುರೇಶ್ ಬಾಬು ಅವರಿಗೆ ಸಂಬಂಧಿಸಿದಂತೆ ಕೋಲಾರದಲ್ಲಿನ ನಿವಾಸ, ಕೋಲಾರ ತಾಲ್ಲೂಕಿನ ಎಡಿಎಲ್‌ಆರ್ ಕಚೇರಿಯ ಹೊರಗುತ್ತಿಗೆ ನೌಕರ ಸುನೀಲ್, ಪರವಾನಗಿ ಭೂಮಾಪಕ ಎಂ.ಸಂದೀಪ್ ಅವರ ಕೋಲಾರ ನಗರದ ಖಾಸಗಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯಾ ಚರಣೆ ನಡೆಸಿದ್ದರು.
ಸುದ್ದಿ ಸಂತೆ ನ್ಯೂಸ್ ಕೋಲಾರ.....