ಧಾರವಾಡ
ನಗರದ ಹೊಸಯಲ್ಲಾಪುರ ಹಾಗೂ ಚರಂತಿಮಠ ಗಾರ್ಡನ್ ಸುತ್ತ ಮುತ್ತಲು ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಬಡಾವಣೆಗಳನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.

ಹುಡಾ ಅಧಿಕಾರಿಗಳು ಅವಳಿ ನಗರದಲ್ಲಿ 120ಕ್ಕೂ ಅಧಿಕ ಅಕ್ರಮ ಬಡಾವಣೆಗಳನ್ನು ಗುರುತಿಸಿದ್ದು, ಆ ಪೈಕಿ 21 ಬಡಾವಣೆಗಳಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬ, ಗುರುತಿನ ಕಲ್ಲುಗಳನ್ನು ತೆರವುಗೊಳಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ ಬಡಾವಣೆ ಮಾಲೀಕರು ಹಾಗೂ ಅಲ್ಲಿ ನಿವೇಶನಗಳನ್ನು ಖರೀದಿಸಿದವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಒಂದೇ ನಿವೇಶನವನ್ನು ಹಲವರಿಗೆ ಮಾರುವ ಎಲ್ಲ ಸಾಧ್ಯತೆಗಳು ಇರುವುದರಿಂದ ಅಕ್ರಮ ಬಡಾವಣೆಗಳ ತೆರವು ಕಾರ್ಯಾಚರಣೆ ಅನಿವಾರ್ಯವಾಗಿತ್ತು.

ಈ ನಿವೇಶನಗಳಿಗೆ ಕಾನೂನಿನಡಿ ಯಾವುದೇ ರಕ್ಷಣೆ ಇರುವುದಿಲ್ಲ. ಹೀಗಾಗಿ ಅಕ್ರಮ ಬಡಾವಣೆಗಳನ್ನು ತಡೆದರೆ ಅಮಾಯಕರಿಗೆ ಅನುಕೂಲವಾಗುತ್ತದೆ. ಅದ್ದರಿಂದ ಇನ್ನು ಮುಂದೆ ಬಡಾವಣೆಗಳನ್ನು ಮಾಡುವವರು ಕೃಷಿಯೇತರ (ಎನ್‌ಎ) ಮಾಡಿಸಿ ನಂತರವೇ ಮಾರಾಟ ಮಾಡಲಿ’ ಎಂದು ಹೇಳಿದರು. ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಇಲಾಖೆಯ ಅಧಿಕಾರಿಗಳು, ಅಧ್ಯಕ್ಷ ನಾಗೇಶ ಕಲಬುರಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.