ಗುರುಮಠಕಲ್ –
ಗಣಿತ ಪಾಠ ತಮಗೆ ಅರ್ಥವಾಗುತ್ತಿಲ್ಲ ಎಂದು ಶಾಲೆ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಗುರುಮಠಕಲ್ ನಲ್ಲಿ ನಡೆದಿದೆ.ಅರಕೇರಾ (ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಯಲ್ಲಿ ಒಟ್ಟು 256 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕಿಯರಿದ್ದು ಗಣಿತ ವಿಷಯ ಬೋಧನೆ ಮಾಡುತ್ತಾರೆ.ಆದರೆ ಕಳೆದ 4 ವರ್ಷಗಳಿಂದ ವಿಷಯ ಬೋಧನೆ ಅರ್ಥವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಗಣಿತ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಅಲ್ಲದೇ ಉತ್ತಮ ಭೋಧನೆ ಮಾಡುವರನ್ನು ನಿಯೋಜಿಸಬೇಕು. ನಮಗೆ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಹೈದರಾಬಾದ್-ಯಾದಗಿರಿ ಜಿಲ್ಲಾ ಮುಖ್ಯ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿ ನಮಗೆ ಉತ್ತಮ ಗಣಿತ ಶಿಕ್ಷಕರನ್ನು ನಿಯೋಜಿಸುವವರೆಗೂ ಶಾಲೆಯೊಳಗೆ ಹೋಗುವುದಿಲ್ಲ ಹಾಗೂ ಸ್ಥಳಕ್ಕೆ ಡಿಡಿಪಿಐ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಪಟ್ಟು ಹಿಡಿದರು.
ಪೋಷಕರು ಡಿಡಿಪಿಐ ಶಾಂತಕುಮಾರ ಪಾಟೀಲ್ ಅವರಿಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾ ರಿಗಳು ಬೆಳಗ್ಗೆ ಶಾಲೆಗೆ ಭೇಟಿ ನೀಡಿದ್ದಾರೆ.ಸಮಸ್ಯೆ ತಿಳಿದು ಎರಡು ದಿನಗಳಲ್ಲಿ ಬೇರೆ ಗಣಿತ ಶಿಕ್ಷಕರನ್ನು ನಿಯೋಜಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.