ಧಾರವಾಡ –
ಗ್ರಾಮ ಪಂಚಾಯತ ಚುನಾವಣಾ ಕಾವು ಆರಂಭಗೊಂಡಿದೆ.ಈಗಾಗಲೇ ಮೊದಲನೇಯ ಹಂತದಲ್ಲಿ ನಡೆಯಲಿರುವ ಧಾರವಾಡ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ಹಂತದ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ ಆರಂಭವಾಗಿದ್ದು ಇಂದು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ..ಮೊದಲ ಹಂತದಲ್ಲಿ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಜರುಗಲಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದೆ.
ಧಾರವಾಡ ತಾಲೂಕಿನ ರಾಮಾಪೂರ ಗ್ರಾಮ ಪಂಚಾಯತಿಗೆ ಒಂದು ಮತ್ತು ತಡಕೊಡ ಗ್ರಾಮಪಂಚಾಯತಿಗೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಅದೇ ರೀತಿ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮಪಂಚಾಯತಿಗೆ ಎರಡು, ಉಗ್ಗಿನಕೇರಿ ಗ್ರಾಮ ಪಂಚಾಯತಿಗೆ ಮೂರು, ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯತಿಗೆ ಒಂದು ಮತ್ತು ದಾಸ್ತಿಕೊಪ್ಪ ಗ್ರಾಮ ಪಂಚಾಯತಿಗೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.ಧಾರವಾಡ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಇಂದು ಒಟ್ಟು ಎರಡು ನಾಮಪತ್ರಗಳು ಮತ್ತು ಕಲಘಟಗಿ ತಾಲೂಕಿನ ಗ್ರಾಮ ಪಂಚಾತಿಗಳಿಗೆ ಒಂಬತ್ತು ನಾಮಪತ್ರಗಳು ಸೇರಿ ಒಟ್ಟು ಹನ್ನೊಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ಅಳ್ನಾವರ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಇಂದು ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.ಒಟ್ಟಾರೆ ಮೊದಲ ದಿನ ಗ್ರಾಮ ಪಂಚಾಯತಿಯ ಗದ್ದುಗೆ ಗುದ್ದಾಟಕ್ಕೇ ಜಿಲ್ಲೆಯಲ್ಲಿ 11 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಸಿದ್ದಾರೆ.