ಕಲಬುರಗಿ –
ಆಳಂದ ತಾಲ್ಲೂಕಿನ ಗುಂಜಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಲಬುರಗಿ ವಿಭಾಗ ಸ್ವಾಭಿಮಾನಿ ಸರ್ಕಾರಿ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಶಿಕ್ಷಕರ ದಿನವಾದ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ₹ 5 ಲಕ್ಷ ಮೊತ್ತದ ಪ್ರಶಸ್ತಿ ನೀಡಿ ಮುಖ್ಯಮಂತ್ರಿ ಅವರು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರನ್ನು ಗೌರವಿಸುವರು.1ರಿಂದ 8ನೇ ತರಗತಿ ಯವರೆಗಿನ ಈ ಶಾಲೆಯಲ್ಲಿ ಬೋಧನೆ ಜೊತೆಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯವೂ ಇದೆ.ಸರ್ಕಾರದಿಂದ ಅಲ್ಲದೇ ದಾನಿಗ ಳಿಂದಲೂ ಆರ್ಥಿಕ ನೆರವು ಈ ಶಾಲೆಗೆ ಸಿಗುತ್ತಿದೆ
ಶಾಲೆಯ ಮುಖ್ಯಶಿಕ್ಷಕ ನಿಂಗಪ್ಪ ಮಂಗೊಂಡಿ ಅವರು ಕೋವಿಡ್ ಸಂದರ್ಭದಲ್ಲಿ ಮಕ್ಕಳ ಬಳಿ ತೆರಳಿ ಪಾಠ ಮಾಡಿದ್ದರು.ಕೂಲಿ ಹುಡುಕಿಕೊಂಡ ದಾವಣಗೆರೆಯ ಸುಣ್ಣದ ಭಟ್ಟಿಗೆ ತೆರಳಿದ್ದ ಪೋಷಕರೊಂದಿಗಿದ್ದ ಮಕ್ಕಳಿಗೆ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿ ಸಮೀಪದ ಶಾಲೆಯಲ್ಲಿ ಓದುವ ವ್ಯವಸ್ಥೆ ಮಾಡಿದ್ದರು.ಈಚೆಗೆ ಶಾಲೆಗೆ ಸುಣ್ಣ, ಬಣ್ಣ ಮಾಡಿ ಮುಗಿಸಿದ್ದರು.
ಶಾಲೆಯಲ್ಲಿ ಕೈಗೊಂಡ ಕಲಿಕಾ ಚಟುವಟಿಕೆಗಳ ಮಾಹಿತಿ ಯನ್ನು ಶಿಕ್ಷಣ ಇಲಾಖೆಗೆ ಕಳಿಸಿದ್ದರು.ಇದನ್ನು ಪರಿಗಣಿಸಿದ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು(ಕೆಎಸ್‌ಕ್ಯೂಎಎಸಿ) ಈ ಶಾಲೆ ಯನ್ನು ಆಯ್ಕೆ ಮಾಡಿದೆ.ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಹೋದ್ಯೋಗಿ ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಶಾಲೆಯು ಪ್ರಶಸ್ತಿಗೆ ಆಯ್ಕೆ ಆಗಿದೆ. ಪ್ರಸ್ತುತ ಶಾಲೆಯಲ್ಲಿ 212 ಮಕ್ಕಳು ಓದುತ್ತಿದ್ದು ಇನ್ನಷ್ಟು ಕೊಠಡಿಗಳ ನಿರ್ಮಾಣ ಆಗುತ್ತಿದೆ.ಅದಾದ ಬಳಿಕ ಇನ್ನಷ್ಟು ಮಕ್ಕಳು ಶಾಲೆಗೆ ಬರಲಿದ್ದಾರೆ.ನಮ್ಮ ಕಲಿಕಾ ಗುಣಮಟ್ಟ ಕಂಡು ಪೋಷಕರು ಮಕ್ಕಳನ್ನು ಖಾಸಗಿ ಶಾಲೆ ಬದಲು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ನಿಂಗಪ್ಪ ಮಂಗೊಂಡಿ ಹೇಳಿದರು.