ಧಾರವಾಡ –
ಲಂಚ ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದು ಸರ್ಕಾರದಿಂದ ಅಮಾನತ್ತಾಗಿದ್ದ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಎಂಜಿನಿಯರ್ ಮನೋಹರ ಮಂಡೋಲಿ ಎಂಬುವವರಿಂದ ಜಿಲ್ಲಾ ಪಂಚಾಯ್ತಿ ಸಿಇಓ 17 ದಿನ ಕೆಲಸ ಮಾಡಿಸಿಕೊಂಡು 2 ಕೋಟಿ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

2020ರ ನವೆಂಬರ್ ತಿಂಗಳಲ್ಲಿ ಮನೋಹರ ಎಂಬುವವರು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು. ಲೈಸೆನ್ಸ್ ನವೀಕರಣಕ್ಕೆ ಸಂಬಂಧಿ ಸಿದಂತೆ ಮನೋಹರ ಹಣಕ್ಕೆ ಬೇಡಿಕೆ ಇಟ್ಟು ಅದನ್ನು ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು.

ಈ ಆರೋಪದಡಿ ಫೆ.17 ರಂದು ಸರ್ಕಾರ ಮನೋಹರ ಮಂಡೋಲಿಯನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಜಿಪಂ ಸಿಇಓ ಸುಶೀಲಾ ಅವರು, ಮನೋಹರ ಅಮಾನತ್ತಾದ 17 ದಿನಗಳ ನಂತರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

ಈ 17 ದಿನಗಳಲ್ಲಿ ಮನೋಹರ ಅನೇಕ ಬಿಲ್ ಗಳಿಗೆ ಸಹಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಸರ್ಕಾರದ ಆದೇಶವನ್ನೂ ಧಿಕ್ಕರಿಸಿ ಸಿಇಓ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವೃತ್ತ ಅಧಿಕಾರಿ ವೈ.ಡಿ.ಕುನ್ನಿಬಾವಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.


ಸದ್ಯ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ಹೋಗಿದ್ದು, ಈ ಬಗ್ಗೆ ಯಾವ ಹಂತದಲ್ಲಿ ತನಿಖೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.