ದಾವಣಗೆರೆ –
ಸರ್ಕಾರಗಳು ಏನೆಲ್ಲಾ ಯೋಜನೆಗಳನ್ನು ತಂದರೂ, ಕೋಟಿಗಟ್ಟಲೆ ಹಣ ಸುರಿದರೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನುವ ದೂರಿದೆ.ಕೆಲವು ಜಿಲ್ಲೆಗಳಲ್ಲಿ ಈಗಲೂ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳನ್ನು ಎದುರಿಸುತ್ತಿದೆ. ಆದರೆ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವಂತೆ ತನ್ನ ರೂಪ ಬದಲಿಸಿಕೊಂಡಿದೆ.
ಜನಪ್ರತಿನಿಧಿಗಳು ಸಂಕಲ್ಪ ಮಾಡಿದರೆ ಚಮತ್ಕಾರ ಮಾಡಬಹುದು ಎಂಬುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ ಹೌದು ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರ ಹುಟ್ಟೂರಿನಲ್ಲಿರುವ ಸರ್ಕಾರಿ ಶಾಲೆ ಇದೀಗ ಹೈಟೆಕ್ ಸ್ಪರ್ಶದೊಂದಿಗೆ ಎಲ್ಲರ ಹುಬ್ಬೇರಿಸುವಂತೆ ಬದಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯು ಇನ್ನೇನು ಕೊಂಪೆಯಾಗುವ ಸ್ಥಿತಿಯಲ್ಲಿತ್ತು. ಅಷ್ಟರ ಮಟ್ಟಿಗೆ ಈ ಶಾಲೆಯು ದುಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ರವಿಕುಮಾರ್ ಅವರು ಶಾಲೆಯ ಚಿತ್ರಣ ವನ್ನೇ ಬದಲಿಸಲು ತೊಡೆತಟ್ಟಿ ಇಂದು ಗೆದ್ದಿದ್ದಾರೆ.
ಶಾಲೆಗೆ ಏನಾದರೂ ಸಣ್ಣಪುಟ್ಟ ಬದಲಾವಣೆ ಮಾಡಿ, ಅದನ್ನೇ ಅಭಿವೃದ್ಧಿ ಎಂದು ಬೆನ್ನುತಟ್ಟಿಕೊಳ್ಳುವ ಪ್ರಚಾರ ಪ್ರಿಯ ರಾಜಕಾರಣಿಗಳ ನಡುವೆ ರವಿಕುಮಾರ್ ಅವರ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಶಾಲೆಯ ಎಂದು ನಂಬಲಾರದ ರೂಪದಲ್ಲಿ, ಖಾಸಗಿ ಶಾಲೆಗಳೂ ನಾಚಿಕೊಳ್ಳುವಂತೆ ವಿನ್ಯಾಸದಲ್ಲಿ ಹೊಸ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗಿದ್ದು, ಇಂದು ಲೋಕಾರ್ಪಣೆಗೊಂಡಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂಎಲ್‌ಸಿ ಎನ್. ರವಿಕುಮಾರ್ ಅವರು, ನನ್ನ ಹಾಗೂ ವಿವಿಧ ಶಾಸಕರು, ಸಂಸದರ ಅನುದಾನದಲ್ಲಿ ನನ್ನ ಹುಟ್ಟೂರಾದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಈಗ ಒಂದು ಸುಸಜ್ಜಿತ ಹೈಟೆಕ್ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಇಂದು ಈ ಹೊಸ ಶಾಲೆ ಲೋಕಾರ್ಪಣೆಗೊಂಡಿದೆ ಎಂದಿದ್ದಾರೆ.
ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಶಾಲೆ ನಿರ್ಮಾಣವಾಗಿದೆ. ಸುಸಜ್ಜಿತವಾದ ಕಟ್ಟಡವು ನೋಡಲು ಖಾಸಗಿ ಹೈಟೆಕ್ ಶಾಲೆಯ ಮಾದರಿಯಲ್ಲೇ ಇದೆ. ಸುಮಾರು 20 ಸಾವಿರ ಚರದ ಅಡಿ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ಎದ್ದು ನಿಂತಿದೆ. ಈ ಶಾಲಾ ಕಟ್ಟಡದಲ್ಲಿ ವಿಶಾಲವಾದ ಒಳಾಂಗಣ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ
ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಸ್ವಾಮಿ ವಿವೇಕಾನಂ ದರ ಹೆಸರಿನಲ್ಲಿ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಕೂಡ ಇದೆ. ಮಕ್ಕಳಿಗೆ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೂಡ ಕೊರೆಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಪೂರೈಕೆಯೂ ಇದೆ.
ಈ ಮೂಲಕ ಎನ್.ರವಿಕುಮಾರ್ ಅವರು ತಮ್ಮ ಹುಟ್ಟೂರಿಗೆ ಹಾಗೂ ಭವಿಷ್ಯದ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಜನಪ್ರತಿನಿಧಿಯೂ ಈ ರೀತಿ ಸಂಕಲ್ಪ ತೊಟ್ಟರೆ ಹಲವರ ಬದುಕಿಗೆ ಬೆಳಕಾಗುವುದಲ್ಲದೆ, ಸಮಾಜದಲ್ಲಿ ಕ್ರಾಂತಿಯನ್ನೇ ತರಬಹುದು ಎಂದು ಶಹಬ್ಬಾಸ್‌ಗಿರಿ ಕೊಡುತ್ತಿದ್ದಾರೆ.
ಅನುದಾನಗಳನ್ನು ನುಂಗುವವರ ನಡುವೆ ರವಿಕುಮಾರ್ ಹಾಗೂ ಈ ಶಾಲೆಯ ಸ್ವರೂಪ ಬದಲಿಸಲು ಕೈಜೋಡಿಸಿ ಜನಪ್ರತಿನಿಧಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..