ಆಂದ್ರಪ್ರದೇಶ –
ಅಪ್ಪ ಕೆಳ ಹಂತದ ಅಧಿಕಾರಿ ಮಗಳು ಅಪ್ಪನ ಮೇಲಿನ ದೊಡ್ಡ ಹುದ್ದೆಯ ಅಧಿಕಾರಿ. ಮಗಳು ಎದುರಿಗೆ ಬಂದ ಕೂಡಲೇ ಮಗಳಿಗೆ ಅಪ್ಪನಿಂದ ಸೆಲ್ಯೂಟ್.ಹೌದು ಇಂಥದೊಂದು ಹೃದಯಸ್ಪರ್ಶಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ಕಂಡು ಬಂದಿದೆ. ಈ ಅಪ್ಪ-ಮಗಳ ಹೃದಯಸ್ಪರ್ಶಿ ಫೋಟೋ ಸಧ್ಯ ಎಲ್ಲೆಡೆ ಫುಲ್ ವೈರಲ್ ಆಗಿದೆ.

ಯುವ ಮಹಿಳಾ ಪೊಲೀಸ್ ಅಧಿಕಾರಿಗೆ ಅವರ ತಂದೆಯೇ ಸೆಲ್ಯೂಟ್ ಮಾಡಿದ ಭಾವನಾತ್ಮಕವಾದ ಕ್ಷಣ . ಹೌದು ಇದು ಮಗಳ ಯಶಸ್ಸು ಕಂಡು ಸಂತೋಷ ಪಟ್ಟ ತಂದೆಯೊಬ್ಬರ ಕತೆ. ತಿರುಪತಿಯ ಪೊಲೀಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಆಂಧ್ರಪ್ರದೇಶದ ಪೊಲೀಸ್ ಡ್ಯೂಟಿ ಮೀಟ್ ನಡೆಯುತ್ತಿದೆ. ಅದರ ಪೂರ್ವಸಿದ್ಧತೆಯಲ್ಲಿ ಭಾಗವಹಿಸಿದ್ದ ಗುಂಟೂರು ನಗರ ದಕ್ಷಿಣ ಡಿವೈಎಸ್ಪಿ ಜೆಸ್ಸಿ ಪ್ರಶಾಂತಿ, ದಿಶಾ ಕಾಯ್ದೆ ಅಡಿಯ ಕರ್ತವ್ಯಪಾಲನೆಯ ಪರಿವೀಕ್ಷಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಡ್ಯೂಟಿ ಮೀಟ್‍ನ ರಿಹರ್ಸಲ್‍ನಲ್ಲಿ ಭಾಗವಹಿಸುತ್ತಿದ್ದ ತಂದೆ ಶಾಂ ಸುಂದರ್‍ರನ್ನು ಎದುರುಗೊಂಡರು.

ತಮಗಿಂತ ಉನ್ನತ ಹುದ್ದೆಯನ್ನು ಪಡೆದು ರ್ಯಾಂಕ್ ಆಫೀಸರ್ ಆಗಿರುವ ಮಗಳನ್ನು ನೋಡಿದಾಕ್ಷಣ ಹೆಮ್ಮೆ ಉಂಟಾಗಿ ತಂದೆ ಸರ್ಕಲ್ ಇನ್ಸ್ಪೆಕ್ಟರ್ ಶಾಂ ಸುಂದರ್ ಸಲ್ಯೂಟ್ ಮಾಡಿದರು. ಡಿವೈಎಸ್ಟಿ ಜೆಸ್ಸಿ ಪ್ರಶಾಂತಿ ಸಹ ಅವರ ತಂದೆಗೆ ಮರು ಸೆಲ್ಯೂಟ್ ಮಾಡಿದರು. ಅಷ್ಟೇ ಅಲ್ಲ, ಶಾಂ ಸುಂದರ್ ತಮ್ಮ ಮಗಳಿಗೆ ಶುಭ ಕೋರಿ, ಮಗಳು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾಳೆ ಎಂಬ ವಿ.ಶ್ವಾಸ ತಮಗಿದೆ ಎಂದು ಹೇಳಿದರು. ಇವೆಲ್ಲವನ್ನೂ ನೋಡುತ್ತಿದ್ದ ಇತರ ಪೊಲೀಸ್ ಸಿಬ್ಬಂದಿಯ ಮುಖ ಕೂಡ ಅರಳಿತು. ತಿರುಪತಿ ನಗರ ಎಸ್ಪಿ ಅವುಲ ರಮೇಶ್ ರೆಡ್ಡಿ ತಂದೆ-ಮಗಳಿಬ್ಬರನ್ನೂ ಪ್ರಶಂಸಿಸಿದರು.