ಅಹಮದಾಬಾದ್ –
ನ್ಯಾಯ ಕೇಳಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ನ್ಯಾಯಾಲಯಕ್ಕೆ ಕಾಂಡೋಮ್ ಪಾರ್ಸೆಲ್ ಕಳುಹಿಸಿಕೊಟ್ಟಿದ್ದಾಳೆ. ನ್ಯಾಯಾಲಯ ಕೊಟ್ಟ ತೀರ್ಪಿಗೆ ಇದು ನನ್ನ ಉತ್ತರ ಎಂದು ಆಕೆ ಹೇಳಿಕೊಂಡಿದ್ದಾಳೆ.ಹೌದು ಅಹಮದಾಬಾದ್ ನ ದೇವಶ್ರೀ ತ್ರಿವೇದಿ ಸುಮಾರು 150 ಕಾಂಡೋಮ್ ಗಳನ್ನು ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿವಾದಾತ್ಮಕ ತೀರ್ಪು ನೀಡಿರುವ ನ್ಯಾಯಮೂರ್ತಿ ಅವರ ಕೊಠಡಿ ಸೇರಿ ಒಟ್ಟು 12 ವಿಳಾಸಕ್ಕೆ ಈ ಕಾಂಡೋಮ್ ಗಳನ್ನು ಕಳುಹಿಸಿಕೊಡಲಾಗಿದೆ. ನ್ಯಾಯಮೂರ್ತಿ ಅವರು ನೀಡಿರುವ ತೀರ್ಪಿಗೆ ಈ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ಫೆಬ್ರವರಿ 9 ರಂದು ಕಾಂಡೋಮ್ ಪಾರ್ಸೆಲ್ ಮಾಡಲಾಗಿದ್ದು, ಈಗಾಗಲೇ ಹಲವು ಕಡೆ ಅದು ರಿಸೀವ್ ಆಗಿರುವುದಾಗಿ ಸಂದೇಶ ಬಂದಿರುವುದಾಗಿ ಆಕೆ ತಿಳಿಸಿದ್ದಾರೆ.
ಜನವರಿ 19 ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ನ್ಯಾಯಮೂರ್ತಿಯವರು ವಿವಾದಾತ್ಮಕ ತೀರ್ಪನ್ನು ನೀಡಿದ್ದರು. ಅಪ್ರಾಪ್ತರ ದೇಹವನ್ನು ಬಟ್ಟೆ ಇದ್ದಾಗ ಮುಟ್ಟುವುದು, ಅವರೆದುರಿಗೆ ಪ್ಯಾಂಟ್ ಜಿಪ್ ತೆಗೆಯುವುದು, ಅವರ ಕೈ ಹಿಡಿದುಕೊಳ್ಳುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಅವರು ತೀರ್ಪು ನೀಡಿದ್ದರು.ಈ ತೀರ್ಪಿನಿಂದಾಗಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ನಡೆದ ಲೈಂಗಿಕ ದೌರ್ಜನ್ಯ ಮುಚ್ಚಿ ಹೋಗುತ್ತದೆ. ಅಪರಾಧಿಗಳು ಮತ್ತಷ್ಟು ತಪ್ಪು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ರೀತಿಯ ತೀರ್ಪು ನೀಡಿರುವ ನ್ಯಾಯಮೂರ್ತಿ ಅಮಾನತು ಆಗಬೇಕು ಎಂದು ಹೋರಾಟನಿರತ ದೇವಶ್ರೀ ತ್ರಿವೇದಿ ಹೇಳಿದ್ದಾರೆ.