ಬೆಳಗಾವಿ –
ಜಮೀನಿನಲ್ಲಿದ್ದ ಟಿ.ಸಿ ಬದಲಿಸಿ ಹೊಸ ಟಿ.ಸಿ ಮಂಜೂರು ಮಾಡಿಕೊಡಲು 65,000 ರೂಪಾಯಿ ಲಂಚ ಪಡೆಯುತ್ತಿದ್ದ ಹೆಸ್ಕಾಂನ ಇಬ್ಬರು ಸೆಕ್ಷನ್ ಅಧಿಕಾರಿಗಳು ಬೆಳಗಾವಿ ಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹೆಸ್ಕಾಂ ಲೋಳುಸರ ಸೆಕ್ಷನ್ ಆಫೀಸರ್ ಪ್ರಕಾಶ್ ವಿರೂಪಾಕ್ಷ ಪರೀಟ್ ಮತ್ತು ಮೇಲ್ವಿಚಾರಕ ಮಲ್ಲಯ್ಯ ಕುಮಾರಸ್ವಾಮಿ ಹಿರೇಮಠ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.ಜಿಲ್ಲೆಯ ಮೂಡಲಗಿ ತಾಲೂಕಿನ ಅರಂಭಾವಿ ಗ್ರಾಮದ ನಿವಾಸಿ ಆನಂದ ಉದ್ದಪ್ಪ ತಮ್ಮ ಜಮೀನಿನಲ್ಲಿರುವ ಟಿ.ಸಿ ಗೆ ವಿದ್ಯುತ್ ಲೋಡ್ ಹೆಚ್ಚಾಗಿ ಹಾಳಾಗುತ್ತಿರುವುದರಿಂದ ಹೊಸ ಟಿ.ಸಿ ಹಾಕಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಅಧಿಕಾರಿಗಳಿಬ್ಬರೂ 65 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಆನಂದ ಅವರು ಎಸಿಬಿಗೆ ದೂರು ನೀಡಿದ್ದರು.ಹೆಸ್ಕಾಂ ಅಧಿಕಾರಿಗಳಿಬ್ಬರೂ 65 ಸಾವಿರ ರೂ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಉತ್ತರ ವಲಯದ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಅವರ ಮಾರ್ಗದಶನದಲ್ಲಿ ಈ ಒಂದು ದಾಳಿ ನಡೆದಿದ್ದು ಸದ್ಯ ಆರೋಪಿ ಅಧಿಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
