ಬೆಂಗಳೂರು
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಕೊನೆಗೂ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕೆಂದು ಸೂಚಿಸಿರುವ ನ್ಯಾಯಾಲಯ ಷರತ್ತುಗಳನ್ನು ನೀಡಿ ಜಾಮೀನು ನೀಡಿದೆ.
ಕಳೆದ 84 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಸಂಜನಾ ಅವರಿಗೆ ಈಗ ಜಾಮೀನು ಸಿಕ್ಕಿದೆ. ಜೈಲಿನಲ್ಲಿರುವ ಸಂಜನಾ ಅವರಿಗೆ ಆರೋಗ್ಯ ಸರಿಯಲ್ಲದ ಕಾರಣದಿಂದಾಗಿ ಜಾಮೀನು ನೀಡಬೇಕೆಂದು ಕೆಲವೇ ದಿನಗಳ ಹಿಂದೆಯಷ್ಟೆ ನಟಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಸಂಜನಾ ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿ, ಅದರ ವರದಿಯನ್ನು ಡಿ.10ರ ಒಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಅದರಂತೆ ಸಂಜನಾ ಅವರನ್ನು ನಗರದ ವಾನಿ ವಿಲಾಸ್ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು. ಆರೋಗ್ಯ ತಪಾಸಣೆಯ ನಂತರ ವೈಧ್ಯಕೀಯ ವರದಿಯನ್ನು ನ್ಯಾಯಾಲಯಕ್ಕೇ ನೀಡಲಾಗಿತ್ತು. ವರದಿಯನ್ನು ಆಧರಿಸಿ ನ್ಯಾಯಾಧೀಶರು ನಟಿಯ ವಕೀಲರ ಮನವಿ ಪುರಸ್ಕರಿಸಿ ಕೊನೆಗೂ ನಟಿ ಸಂಜನಾಗೆ ಜಾಮೀನು ನೀಡಿದ್ದಾರೆ.ನಟಿ ಸಂಜನಾ ಇಂದು ಸಂಜೆಯೇ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ಬಳಲುತ್ತಿರುವ ಸಂಜನಾ ಅವರನ್ನು ತಪಾಸಣೆ ಮಾಡಿ ವೈದ್ಯರು ನೀಡಿದ್ದ ವರದಿಯ ಆಧಾರದ ಮೇಲೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಇಂದು ಸಂಜೆಯೇ ಆದೇಶ ಜೈಲಾಧಿಕಾರಿಗಳ ಕೈ ಸೇರಿದರೆ, ಸಂಜನಾ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ಅವರನ್ನು ಬಂಧಿಸಿದ ನಂತರ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸೆ. 9ರಂದು ಸಿಸಿಬಿ ಪೊಲೀಸರು ಸಂಜನಾ ಅವರನ್ನು ಬಂಧಿಸಿ, ಸೆ. 16ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.ಒಟ್ಟಾರೆ 84 ದಿನಗಳ ನಂತರ ಕೊನೆಗೂ ನಟಿ ಸಂಜನಾಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ಜೈಲಿನಿಂದ ಇಂದು ಸಂಜೆ ಬಿಡುಗಡೆಯಾಗಲಿದ್ದಾರೆ.