ಬೆಂಗಳೂರು –
ಬೆಂಗಳೂರಿನ ಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಜನರ ನಿದ್ದೆ ಗೆಡಿಸಿದ್ದ ಮನೆಗಳ್ಳನನ್ನು ಮೂರು ತಾಸು ಚೇಸಿಂಗ್ ಮಾಡಿ ಕೊನೆಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಸ್ಮಾಯಿಲ್ ಸೆರೆ ಸಿಕ್ಕ ಕಳ್ಳನಾಗಿದ್ದಾನೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಈತನ ಕಾಲಿಗೆ ಗುಂಡು ಹಾರಿಸಿ ಜಯನಗರ ಪೊಲೀಸ್ ಇನ್‌ಸ್ಪೆಕ್ಟರ್ ಸುದರ್ಶನ್ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈತನಿಂದ ಗಾಯಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧಿತ ಇಸ್ಮಾಯಿಲ್ ಜಯನಗರದ ಎಂಟನೇ ಬ್ಲಾಕ್ ನಲ್ಲಿ ಬಂಧನಕ್ಕೆ ಒಳಗಾಗಿದ್ದು, ಈತನ ವಿರುದ್ಧ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಜಯನಗರದಲ್ಲಿ ಬೆಳಗ್ಗೆ ಎರಡು ಕಡೆ ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಇಸ್ಮಾಯಿಲ್ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಆಟೋದಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಅವರನ್ನು ಹಿಂಬಾಲಿಸಿದ ಪೊಲೀಸರು ಸತತ ಮೂರು ತಾಸು ಚೇಸಿಂಗ್ ಮಾಡಿದ್ದಾರೆ. ಅಡ್ಡ ಬಂದ ಸೆಕ್ಯುರಿಟಿ ಗಾರ್ಡ್ ಗೆ ಇಸ್ಲಾಯಿಲ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಇಷ್ಟಾಗಿಯೂ ಬೆನ್ನು ಬಿಡದ ಪೊಲೀಸರು ಜಯನಗರ 8 ನೇ ಬ್ಲಾಕ್ ಸಮೀಪ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಸುದರ್ಶನ್ ಸರ್ವಿಸ್ ರಿವಲ್ವಾರ್ ನಿಂದ ಗುಂಡು ಹಾರಿಸಿದ್ದಾರೆ. ಇಸ್ಮಾಯಿಲ್ ಎಡ ಕಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದು, ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.