ಬೀದರ್ -
ಬಸವಕಲ್ಯಾಣದಲ್ಲಿ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಕಾಂಗ್ರೆಸ್ ಮಾಜಿ ಎಂಎಲ್ಸಿ ವಿಜಯ್ ಸಿಂಗ್ ನಡುವಿನ ಬ್ಯಾನರ್ ಗಲಾಟೆ ಇದೀಗ ಇಬ್ಬರು ಸರ್ಕಾರಿ ಅಧಿಕಾರಿಗಳ ಅಮಾನತಿಗೆ ಕಾರಣವಾಗಿದೆ ಹೌದು ರಾಜಕೀಯ ಗುದ್ದಾಟದ ನಡುವೆ ಆರೋಗ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಕಾರಣವಾಗಿದೆ
ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಯಲ್ಲಿ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೀದರ್ ಡಿಹೆಚ್‌ಒ ಡಾ.ಧ್ಯಾನೇಶ್ವರ ನಿರಗುಡೆ ಹಾಗೂ ಬಸವಕಲ್ಯಾಣ ಟಿಎಚ್‌ಒ ಡಾ. ಅಶೋಕ್ ಮೈಲಾರೆ ಅವರನ್ನು ಆರೋಗ್ಯ ಇಲಾಖೆ ಅಮಾನತು ಗೊಳಿಸಿದೆ.ಆರೋಗ್ಯ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ಅಮಾನತು ಆದೇಶ ಹೊರಡಿಸಿದ್ದು, ಇಬ್ಬರನ್ನೂ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಡಾ. ಧ್ಯಾನೇಶ್ವರ ನಿರಗುಡೆ ಅವರನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ಹಾಗೂ ಡಾ. ಅಶೋಕ್ ಮೈಲಾರೆ ಅವರನ್ನು ಅಫಜಲಪುರ ತಾಲೂಕು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.ಸೆಪ್ಟೆಂಬರ್ 16ರಂದು ಬಸವ ಕಲ್ಯಾಣದಲ್ಲಿ ತಾಲೂಕು ವಿಭಾಗೀಯ ಮಟ್ಟದ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮದ ವೇದಿಕೆ ಬ್ಯಾನರ್ನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಫೋಟೋ ಹಾಕದಿರು ವುದು ವಿವಾದಕ್ಕೆ ಕಾರಣವಾಗಿತ್ತು.
ಶಿಷ್ಟಾಚಾರದಂತೆ ಸಚಿವರ ಫೋಟೋ ಇರಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಬಳಿಕ ಅಧಿಕಾರಿಗಳು ಬ್ಯಾನರ್ ಬದಲಿಸಲು ಮುಂದಾದಾಗ ಶಾಸಕ ಶರಣು ಸಲಗರ್ ಮತ್ತು ವಿಜಯ್ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಬ್ಯಾನರ್ ವಿಚಾರಕ್ಕೆ ವಿಜಯ್ಸಿಂಗ್ ಗಲಾಟೆ ಮಾಡುತ್ತಿ ದ್ದಾರೆ ಎಂದು ಆರೋಪಿಸಿ ಸಲಗರ್ ಆಕ್ಷೇಪ ವ್ಯಕ್ತಪಡಿಸಿದ್ದರು ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲಗರ್ ದೂರವಾಣಿ ಕರೆ ಮಾಡಿ ವಿಜಯ್ ಸಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು
ಘಟನೆ ಬಳಿಕ ವಿಜಯ್ಸಿಂಗ್ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಮತ್ತೊಂದೆಡೆ, ಬ್ಯಾನರ್ ವಿಚಾರದಲ್ಲಿ ತಮ್ಮ ವಿರುದ್ಧ ನಡೆದ ಬೆಳವಣಿಗೆಗಳ ಬಗ್ಗೆ ಶಾಸಕ ಶರಣು ಸಲಗರ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಇಬ್ಬರು ನಾಯಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಐಬಿಗೆ ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಬಳಿಕ ಇಬ್ಬರನ್ನೂ ತಮ್ಮ ವಾಹನದಲ್ಲೇ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು.
ಇದೀಗ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇಬ್ಬರು ಅಧಿಕಾರಿ ಗಳ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ. ಶಾಸಕರು ಹಾಗೂ ಮಾಜಿ ಎಂಎಲ್ಸಿ ನಡುವಿನ ಬ್ಯಾನರ್ ಗಲಾಟೆಗೆ ಅಧಿಕಾರಿಗಳಿಬ್ಬರು ಅಮಾನತಿಗೆ ಒಳಗಾಗಿರುವುದು ಬೀದರ್ ರಾಜಕೀಯ ವಲಯ ದಲ್ಲಿ ಚರ್ಚೆಗೆ ಕಾರಣವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೀದರ್.....