ಬೆಂಗಳೂರು -
2 ಕಿ.ಮೀ ಕ್ರಮಿಸಲು 2 ಗಂಟೆ, ಶಾಲೆಗೆ ಹೋಗೋದೇ ಸಾಹಸ ಕಂಗೆಟ್ಟ ಪೋಷಕರಿಂದ ಆನ್‌ಲೈನ್ ಸಮರ ಹೌದು ರಾಜ್ಯ ರಾಜಧಾನಿ ಬೆಂಗಳೂರಿನ ಐಟಿ ವಲಯಕ್ಕೆ ಹತ್ತಿರವಿರುವ ವೈಟ್‌ಫೀಲ್ಡ್-ವರ್ತೂರು-ಗುಂಜೂರು ಭಾಗದಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದ್ದು, ಶಾಲಾ ಮಕ್ಕಳು ಮತ್ತು ಪೋಷಕರು ಪ್ರತಿದಿನ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯು ವಂತಾಗಿದೆ.
ಸೆಪ್ಟೆಂಬರ್ 17ರಂದು ಶಾಲಾ ಬಸ್‌ಗಳು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ನಂತರ ಕಂಗೆಟ್ಟ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ತಕ್ಷಣವೇ ರಸ್ತೆ ದುರಸ್ತಿ ಮತ್ತು ಸಂಚಾರ ನಿರ್ವಹಣೆಗೆ ಆಗ್ರಹಿಸಿ ಬೃಹತ್ ಆನ್‌ಲೈನ್ ಅಭಿಯಾನ ಆರಂಭಿ ಸಿದ್ದಾರೆ
ಕೇವಲ 2 ಕಿಲೋಮೀಟರ್ ದೂರವನ್ನು ಕ್ರಮಿಸಲು ಶಾಲಾ ಬಸ್ ಬರೋಬ್ಬರಿ 2 ಗಂಟೆ ತೆಗೆದುಕೊಂಡಿದೆ ಎಂದು ಹರಿ ಎಂಬ ಪೋಷಕರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 5 ಕಿ.ಮೀ ಪ್ರಯಾಣಕ್ಕೆ ಎರಡು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿದ್ದು, ಸಣ್ಣ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆನ್‌ಲೈನ್ ಮನವಿಗೆ ಈಗಾಗಲೇ 2,500ಕ್ಕೂ ಹೆಚ್ಚು ಪೋಷಕರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ ರಸ್ತೆ ಗುಂಡಿ ಮತ್ತು ಕಾಮಗಾರಿಯಿಂದ ಸಂಚಾರ ವೈಫಲ್ಯ
ರಾಜ್ಯ ಹೆದ್ದಾರಿ-35ರಲ್ಲಿ (SH-35) ಗುಂಜೂರು ಕ್ಲಬ್ ರಸ್ತೆಯನ್ನು ವೈಟ್-ಟಾಪಿಂಗ್ ಕಾಮಗಾರಿಗಾಗಿ ಮುಚ್ಚಿರುವುದು ಮತ್ತು ಕಳೆದ ಕೆಲವು ದಿನಗಳಿಂದ ಬಿದ್ದ ಮಳೆಯಿಂದಾಗಿ ರಸ್ತೆಗಳು ಪೂರ್ತಿ ಹಾಳಾಗಿ ರುವುದು ಈ ಟ್ರಾಫಿಕ್ ಜಾಮ್‌ಗೆ ಮುಖ್ಯ ಕಾರಣ ವಾಗಿದೆ. ಕ್ರಿಸಾಲಿಸ್ ಹೈಸ್ಕೂಲ್ ಹಾಗೂ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟಾಟ್ ಬಳಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಬೇಸತ್ತ ಸ್ಥಳೀಯರೇ ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚುತ್ತಿರುವ ದೃಶ್ಯಗಳು ಕಂಡುಬಂದಿವೆ.
ವರ್ತೂರು ಕೋಡಿಯಿಂದ ವರ್ತೂರು ನಡುವೆ ಕೆಆರ್‌ಡಿಸಿಎಲ್ ನಡೆಸುತ್ತಿರುವ 1.9 ಕಿ.ಮೀ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ವಿರೋಧವಿಲ್ಲ ಆದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ಪೋಷಕರ ಸ್ಪಷ್ಟ ನಿಲುವಾಗಿದೆ.
ರಸ್ತೆಯಲ್ಲಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಿ ಸುಸ್ಥಿತಿಗೆ ತರಬೇಕು.ಶಾಲಾ ಬಸ್‌ಗಳು ಸಂಚರಿಸುವ ಬೆಳಗಿನ ಹಾಗೂ ಸಂಜೆಯ ವೇಳೆಯಲ್ಲಿ ಭಾರಿ ಮತ್ತು ಸರಕು ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.ಸಂಚಾರ ಪೊಲೀಸ್, ಕೆಆರ್‌ಡಿಸಿಎಲ್, ಬಿಬಿಎಂಪಿ, ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ಪ್ರತಿನಿಧಿಗಳು ಜಂಟಿ ಪರಿಶೀಲನೆ ನಡೆಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....