ಕಲಬುರಗಿ -
ನಕಲಿ ಅಂಕಪಟ್ಟಿಯನ್ನು ನೀಡಿ ಸರ್ಕಾರಿ ನೌಕರಿಗೆ ಸೇರಿಕೊಂಡಿದ್ದ 52 ಗ್ರೂಪ್ 'ಡಿ' ಸಿಬ್ಬಂದಿಯನ್ನು ಅಮಾನತು ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.ಕಳೆದ 2015ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 'ಡಿ' ಗ್ರೂಪ್ ಹುದ್ದೆಗೆ ಆಯ್ಕೆಯಾಗಿದ್ದ 52 ಜನ ಸಿಬ್ಬಂದಿ ಸಲ್ಲಿಸಿದ್ದ SSLC ಅಂಕ ಪಟ್ಟಿ ನಕಲಿ ಎಂದು ದೃಢಪಟ್ಟಿದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಶಿಸ್ತು ಪ್ರಾಧಿಕಾರದ ನಿರ್ದೇಶಕಿ ರಜನಿ ಎಂ. ಅವರು ಈ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಅಮಾತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡಿರುವ ಕಲಬುರಗಿ, ಯಾದಗಿರಿ, ಬೀದರ ಜಿಲ್ಲೆಯ ಒಟ್ಟು 52 ಜನ ಸಿಬ್ಬಂದಿ ಪೈಕಿ ವಾಡಿ (ಜಂ)-4, ಗುಂಡಗುರ್ತಿ-5, ಶಾಹಾಬಾದ್-1, ಕಾಳಗಿ-1 ಒಟ್ಟು 11 ಜನ ಡಿ ಗ್ರೂಪ್ ಸಿಬ್ಬಂದಿ ಅಮಾನತು ಗೊಂಡಿದ್ದಾರೆ ಎಂದು ನಿರ್ದೇಶಕರು ಹೊರಡಿಸಿರುವ ಅಮಾನತು ಆದೇಶದಲ್ಲಿದೆ.
ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ-2, ದೇವಲ ಗಾಣಗಾಪುರ-6, ಸೇಡಂ ತಾಲ್ಲೂಕಿನ ಮಳಖೇಡ-3, ಮುಧೋಳ-1, ಚಿಂಚೋಳಿ ತಾಲ್ಲೂಕು ಆಸ್ಪತ್ರೆ-2, ಜಿಲ್ಲಾ ಆಸ್ಪತ್ರೆ (500 ಹಾಸಿಗೆ)-1, ಜಿಲ್ಲಾ ಆಸ್ಪತ್ರೆ-2, ಜಿಲ್ಲಾ ಆನೆಕಾಲು ರೋಗ ನಿಯಂತ್ರಣ ಘಟಕ-1, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಾರ್ಯಾಲಯ-1, ಸೊಂತ-1, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜೇವರ್ಗಿ-2, ಜೇವರ್ಗಿ ತಾಲ್ಲೂಕಿನ ನೆಲೋಗಿ-1, ಯಡ್ರಾಮಿ-1 ಹೀಗೆ ವಿವಿಧ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಅಮಾನತುಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಸಗರ, ದೋರನಹಳ್ಳಿ, ಹೇಮನೂರ, ಶಹಾಪುರ, ವನದುರ್ಗ, ಸುರಪುರ ಆಸ್ಪತ್ರೆ ಸಿಬ್ಬಂದಿ ಮತ್ತು ಬೀದರ್ ಜಿಲ್ಲೆಯ ಚಿಟಗುಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಅಮಾನತುಗೊಂಡಿ ದ್ದಾರೆ. ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ಹೊಂದಲು ಇಲಾಖೆಗೆ ಸಲ್ಲಿಸಿರುವ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿನ ಅಂಕಗಳಿಗೆ ಮತ್ತು ನೈಜ ಅಂಕ ಪಟ್ಟಿಯಲ್ಲಿನ ಅಂಕಗಳಿಗೆ ಭಾರಿ ವ್ಯತ್ಯಾಸ ಇರುವುದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಿಂದ ಪತ್ತೆ ಹಚ್ಚಿ ಆರೋಗ್ಯ ಇಲಾಖೆಗೆ ಸಮಗ್ರ ಮಾಹಿತಿಯ ವರದಿ ನೀಡಿದ್ದಾರೆ ಎಂದು ಆದೇಶ ಪತ್ರದಲ್ಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....