ಹಾವೇರಿ -
ಸರ್ಕಾರಿ ಶಾಲೆಯ ಮಕ್ಕಳಿಗೆ 15 ದಿನಗಳ ಕಾಲ ಬಿಸಿಯೂಟಕ್ಕೆ ಅಕ್ಕಿ ಪೂರೈಕೆಯಾಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ ಹಾಗೂ ಅಕ್ಷರ ದಾಸೋಹ ಅಧಿಕಾರಿಯನ್ನು ಅಮಾನತುಗೊಳಿಸ ಲಾಗಿದೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.ಶಾಲೆಗೆ ಸುಮಾರು 15 ದಿನಗಳ ಕಾಲ ಬಿಸಿಯೂಟಕ್ಕೆ ಅಗತ್ಯವಾದ ಅಕ್ಕಿ ಪೂರೈಕೆ ಯಾಗಿರಲಿಲ್ಲ. ಪರಿಣಾಮವಾಗಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರೇ ತಮ್ಮ ಸ್ವಂತ ಖರ್ಚಿನಲ್ಲಿ ಅಕ್ಕಿ ಖರೀದಿಸಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ನೋಟಿಸ್‌ಗೆ ಮುಖ್ಯ ಶಿಕ್ಷಕ ಮತ್ತು ಅಕ್ಷರ ದಾಸೋಹ ಅಧಿಕಾರಿಗಳು ನೀಡಿದ ಸಮಜಾಯಿಷಿ ಸಮರ್ಪಕವಾಗಿಲ್ಲ ಎಂದು ತಿಳಿದುಬಂದಿದೆ.
ಶಾಲೆಗೆ 15 ದಿನಗಳ ಕಾಲ ಅಕ್ಕಿ ಪೂರೈಕೆಯಾಗ ದಿದ್ದರೂ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರದಿರುವುದು ಗಂಭೀರ ಕರ್ತವ್ಯಲೋಪ ಎಂದು ಪರಿಗಣಿಸಲಾಗಿದೆ. ಪಿಎಂ ಪೋಷಣ್ ಶಕ್ತಿ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಚಳ್ಳಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಫ್.ಸಿ. ಬಾಳಿಕಾಯಿ ಹಾಗೂ ಅಕ್ಷರದಾಸೋಹ ಅಧಿಕಾರಿ ಟಿ.ಎಸ್. ಮಳವಳ್ಳಿ ಅವರನ್ನು ಅಮಾನತುಗೊಳಿಸಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ದಲ್ಜತ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹಾವೇರಿ.....