ಬೆಂಗಳೂರು -
ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಲು ಸರ್ಕಾರದ ಆದೇಶ ಸರ್ಕಾರಿ ನೌಕರರು ತಾವು ಕರ್ತವ್ಯ ನಿರ್ವಹಿ ಸುವ ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು ಎಂದು ಕರ್ನಾಟಕ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಕೇಂದ್ರ ಸ್ಥಾನದಿಂದ ಹೊರಗೆ ವಾಸವಿದ್ದು ಪ್ರತಿನಿತ್ಯ ಕಚೇರಿಗೆ ಸಂಚರಿಸುವುದರಿಂದ ಸರ್ಕಾರಿ ಕೆಲಸಗಳ ವಿಲೇವಾರಿಗೆ ತೊಂದರೆಯಾಗುತ್ತಿದೆ ಎಂಬ ಹಿನ್ನೆಲೆ ಯಲ್ಲಿ ಸರ್ಕಾರ ಈ ಸೂಚನೆ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಸಚಿವಾಲಯದಿಂದ ಸೆಪ್ಟೆಂಬರ್ 30, 2026 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಗಳ ಕೇಂದ್ರ ಸ್ಥಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ.ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸ್ಥಾನದಲ್ಲಿ ವಾಸಿಸದೆ ಕೇಂದ್ರ ಸ್ಥಾನದ ಹೊರಗಿನ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸುತ್ತೋಲೆ ಯಲ್ಲಿ ತಿಳಿಸಲಾಗಿದೆ. ಇಂತಹ ಸಿಬ್ಬಂದಿಗಳು ಪ್ರತಿನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಸಂಚರಿಸುವುದರಿಂದ ಕಚೇರಿ ಕಾರ್ಯಗಳ ವಿಲೇವಾರಿಗೆ ಅಡಚಣೆಯಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸ ಗಳಿಗಾಗಿ ಆಗಮಿಸುವ ಸಾರ್ವಜನಿಕರಿಗೆ ಕೂಡ ಇದರಿಂದ ತೊಂದರೆಯಾಗುತ್ತಿದೆ ಎಂದು ಸುತ್ತೋಲೆ ಯಲ್ಲಿ ತಿಳಿಸಲಾಗಿದೆ.ಸರ್ಕಾರಿ ನೌಕರರ ಕೇಂದ್ರ ಸ್ಥಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 13, 14 ಮತ್ತು 15ರಲ್ಲಿ ಸ್ಪಷ್ಟವಾದ ನಿಯಮಗಳಿವೆ ಎಂದು ಸರ್ಕಾರ ತಿಳಿಸಿದೆ.ನಿಯಮ 14ರ ಪ್ರಕಾರ, ಸರ್ಕಾರಿ ನೌಕರರ ಕೇಂದ್ರ ಸ್ಥಾನವನ್ನು ಸಂಬಂಧಪಟ್ಟ ಪ್ರಾಧಿಕಾರ ನಿರ್ಧರಿಸಬಹುದು ಅಂತಹ ನಿರ್ಧಾರ ಇಲ್ಲದಿದ್ದಲ್ಲಿ, ನೌಕರರ ಕಚೇರಿ ದಾಖಲೆಗಳು ಇರುವ ಸ್ಥಳವನ್ನು ಕೇಂದ್ರ ಸ್ಥಾನವೆಂದು ಪರಿಗಣಿಸಲಾಗುತ್ತದೆ.
ಇನ್ನು ನಿಯಮ 15ರ ಪ್ರಕಾರ ಸೂಕ್ತ ಪ್ರಾಧಿಕಾರದ ಅನುಮತಿ ಇಲ್ಲದೆ ಸರ್ಕಾರಿ ನೌಕರರು ತಮ್ಮ ಕರ್ತವ್ಯ ವ್ಯಾಪ್ತಿಯ ಹೊರಗೆ ಇರುವ ಅವಧಿಗೆ ವೇತನ ಅಥವಾ ಭತ್ಯೆ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ನಿಯಮಗಳಿಗೆ ಒಳಪಡುವ ನೌಕರರನ್ನು ಹೊರತುಪಡಿಸಿ ಇತರೆ ಸರ್ಕಾರಿ ನೌಕರರು ಸಮರ್ಥ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ತೊರೆಯುವುದು ನಿಯಮಬಾಹಿರವಾ ಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ರಜಾದಿನಗಳು ಅಥವಾ ಕ್ಯಾಶುವಲ್ ರಜೆಯ ಸಂದರ್ಭದಲ್ಲಿ ಕೇಂದ್ರ ಸ್ಥಾನದಿಂದ ಹೊರಗೆ ತೆರಳಲು, ಕ್ಯಾಶುವಲ್ ರಜೆ ಯನ್ನು ಮಂಜೂರು ಮಾಡುವ ಅಧಿಕಾರ ಹೊಂದಿ ರುವ ಪ್ರಾಧಿಕಾರ ಅನುಮತಿ ನೀಡಬಹುದಾಗಿದೆ
ಈ ನಿಯಮಗಳನ್ನು ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿ ಕೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ. ಸುತ್ತೋಲೆಯ ಪ್ರತಿಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಇಲಾಖಾ ಮುಖ್ಯಸ್ಥರು, ನಿಗಮ-ಮಂಡಳಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವ್ಯಾಪ್ತಿಯ ಅಧೀನ ಕಚೇರಿಗಳಿಗೆ ಕಳುಹಿಸ ಲಾಗಿದೆ.
ಒಟ್ಟಾರೆ, ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಿಂದ ಹೊರಗೆ ವಾಸಿಸುವ ಸರ್ಕಾರಿ ನೌಕರರ ವಿಚಾರದಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರ ಸೂಚಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....