ಅಹಮದಾಬಾದ್ –
ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರ ಅರ್ಧ ಶತಕಗಳು, ಭುವನೇಶ್ವರ ಕುಮಾರ್ ನೇತೃತ್ವ ದಲ್ಲಿ ಬೌಲರ್ ಗಳ ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಐದನೇ ಹಾಗೂ ಅಂತಿ ಮ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 36 ರನ್ ಗಳ ಅಂತರದಿಂದ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ.
ಶನಿವಾರ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಡೇವಿಡ್ ಮಲಾನ್(68, 46 ಎಸೆತ)ಹಾಗೂ ಜೋಸ್ ಬಟ್ಲರ್ (52, 32 ಎಸೆತ)ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಪರ ಹಿರಿಯ ವೇಗದ ಬೌಲರ್ ಭುವನೇಶ್ವರ(2-15), ಶಾರ್ದೂಲ್ ಠಾಕೂರ್ (3-45)ಐದು ವಿಕೆಟ್ ಗಳನ್ನು ಹಂಚಿಕೊಂಡರು. ಹಾರ್ದಿಕ್ ಪಾಂಡ್ಯ(1-34) ಹಾಗೂ ಟಿ.ನಟರಾಜನ್ (1-39)ತಲಾ ಒಂದು ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ, ರೋಹಿತ್ ಅಬ್ಬರದ ಆಟ
ಇದಕ್ಕೂ ಮೊದಲು ನಾಯಕನ ಆಟವಾಡಿದ ಕೊಹ್ಲಿ(ಔಟಾಗದೆ 80, 52 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (ಔಟಾಗದೆ 39, 17 ಎಸೆತ, 4 ಬೌಂಡರಿ, 2 ಸಿಕ್ಸರ್) ಭಾರತವು ಇಂಗ್ಲೆಂಡ್ ಗೆ ಕಠಿಣ ಗುರಿ ನೀಡಲು ನೆರವಾದರು.
ಇನಿಂಗ್ಸ್ ಆರಂಭಿಸಿದ ರೋಹಿತ್ ಹಾಗೂ ಕೊಹ್ಲಿ ಮೊದಲ 9 ಓವರ್ ಗಳಲ್ಲಿ 94 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ರೋಹಿತ್ (64, 34 ಎಸೆತ, 4 ಬೌಂಡರಿ, 5 ಸಿಕ್ಸರ್) ನಿರ್ಗಮನದ ಬಳಿಕ ಸೂರ್ಯ ಕುಮಾರ್ ಯಾದವ್ (32, 17 ಎಸೆತ) ಹಾಗೂ ಕೊಹ್ಲಿ 2ನೇ ವಿಕೆಟ್ ಗೆ 49 ರನ್ ಸೇರಿಸಿದರು.
ಯಾದವ್ ಔಟಾದ ಬಳಿಕ ಕೊಹ್ಲಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದರು. ಈ ಜೋಡಿ ಮೂರನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 81 ರನ್ (40 ಎಸೆತ) ಸೇರಿಸಿ ಭಾರತದ ಸ್ಕೋರನ್ನು 200ರ ಗಡಿ ದಾಟಿಸಿತು ಇನ್ನೂ ಅಂತಿಮವಾಗಿ ಭಾರತ ಗೆಲುವು ಸಾಧಿಸಿತು