ಚೆನ್ನೈ –
ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಆಕಾಶದತ್ತ ಮುಖ ಮಾಡಿ ಏರುತ್ತಲೇ ಇದೆ. ದಿನೇದಿನೇ ಬೆಲೆ ಹೆಚ್ಚಳವಾಗುತ್ತಿದೆ.ಇವೆಲ್ಲದರ ನಡುವೆ ಇಲ್ಲೊಂದು ಪೆಟ್ರೋಲ್ ಬಂಕ್ ನಲ್ಲಿ ಮಾತ್ರ ಉಚಿತವಾಗಿಯೇ ಪೆಟ್ರೋಲ್ ಕೊಡೋದಕ್ಕೆ ಸಿದ್ಧವಿದೆ. ಇಂತಹ ಒಂದು ನಿರ್ಧಾರವನ್ನು ಬಂಕ್ ಯಾವ ಕಾರಣಕ್ಕೆ ತೆಗೆದುಕೊಂಡಿದೆ, ಫ್ರೀ ಪೆಟ್ರೋಲ್ ಪಡೆಯೋದಕ್ಕೆ ನೀವೆನು ಮಾಡಬೇಕು

ಹೌದು ತಮಿಳುನಾಡಿನ ಕರೂರು ಜಿಲ್ಲೆಯ ನಾಗಂಪಳ್ಳಿ ಗ್ರಾಮದಲ್ಲಿರುವ ವಲ್ಲುವರ್ ಏಜೆನ್ಸಿಗಳ ಪೆಟ್ರೋಲ್ ಬಂಕ್ ನಲ್ಲಿ ಇಂತಹದೊಂದು ಆಫರ್ ಇದೆ. ಇಲ್ಲಿ ನಿಮಗೆ ಉಚಿತ ಪೆಟ್ರೋಲ್ ಬೇಕೆಂದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು. 1ರಿಂದ 12ನೇ ತರಗತಿವರೆಗಿನ ಯಾವುದೇ ವಿದ್ಯಾರ್ಥಿ ತಿರುವಳ್ಳುವರ್ ತಿರುಕ್ಕುರಲ್ನ ಕವಿಯ ಯಾವುದಾದರೂ ದ್ವಿಪದಿಗಳನ್ನು ಹೇಳಿದರೆ ನಿಮಗೆ ಉಚಿತವಾಗಿ ಪೆಟ್ರೋಲ್ ಸಿಗುತ್ತದೆ. 10 ದ್ವಿಪದಿ ಹೇಳಿದರೆ ಅರ್ಧ ಲೀಟರ್ ಹಾಗೂ 20 ದ್ವಿಪದಿ ಹೇಳಿದರೆ ಒಂದು ಲೀಟರ್ ಪೆಟ್ರೋಲ್ ಫ್ರೀ.

ತಮಿಳುನಾಡಿನ ಶ್ರೇಷ್ಠ ಕವಿ ತಿರುವಳ್ಳುವರ ಸಾವಿರಾರು ದ್ವಿಪದಿಗಳನ್ನು ರಚಿಸಿದ್ದಾರೆ. ಅದನ್ನೆಲ್ಲ ಒಟ್ಟುಗೂಡಿಸಿ ತಿರುಕ್ಕುರಲ್ ಹೆಸರಿನ ಪಠ್ಯ ರಚಿಸಲಾಗಿದೆ. ರಾಜ್ಯದ ಮಕ್ಕಳಲ್ಲಿ ಆ ದ್ವಿಪದಿಗಳನ್ನು ಉಳಿಸಿ, ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಸಲುವಾಗಿ ಪೆಟ್ರೋಲ್ ಬಂಕ್ ನವರು ಈ ಯೋಜನೆ ಹಾಕಿಕೊಂಡಿದ್ದಾರಂತೆ.

ಮಕ್ಕಳು ತಾವು ಹೇಳುವ ದ್ವಿಪದಿಯನ್ನು ಬರೆದಿರುವ ಪುಟವನ್ನು ಪೆಟ್ರೋಲ್ ಬಂಕ್ ನವರಿಗೆ ನೀಡಬೇಕು. ನಂತರ ಅದನ್ನು ನೋಡದೆಯೇ ಹೇಳಬೇಕು. ಮಕ್ಕಳು ಯಾವುದೇ ತಪ್ಪಿಲ್ಲದೆ ದ್ವಿಪದಿ ಹೇಳಿದರೆ ಬಂಕ್ ನವರು ಖುಷಿಯಿಂದ ಗಾಡಿಗೆ ಉಚಿತ ಪೆಟ್ರೋಲ್ ತುಂಬಿಸಿ ಕಳಿಸುತ್ತಾರೆ.

ಇನ್ನೂ ತಪ್ಪು ಹೇಳಿದ್ದಾದಲ್ಲಿ, ದುಡ್ಡು ಕೊಟ್ಟು ಪೆಟ್ರೋಲ್ ತುಂಬಿಸಿಕೊಳ್ಳಬಹುದು. ಎನೇ ಆಗಲಿ ಮಕ್ಕಳಿಗೆ ಹಿರಿಯ ಕವಿಯ ಬಗ್ಗೆ ಮತ್ತು ಅವರ ದ್ವಿಪದಿಗಳ ಬಗ್ಗೆ ಈ ರೀತಿಯ ಒಂದು ವಿಶೇಷವಾದ ಆಂದೋಲನ ಮಾಡುತ್ತಿರುವುದು ಮೆಚ್ಚುವಂತದ್ದು ದುಬಾರಿಯಾದ ಇಂದಿನ ದಿನಗಳಲ್ಲಿ ಇಂಥಹ ಯೋಜನೆ ಹಮ್ಮಿಕೊಂಡಿದ್ದು ಶ್ಲಾಘನೀಯ.