ಮುಂಡರಗಿ –
ನಮ್ಮ ನಡಿಗೆ ನದಿಯ ಕಡೆಗೆ’ ಕಾರ್ಯಕ್ರಮ ಹೌದು ಮುಂಡರಗಿ ತಾಲ್ಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಮ್ಮ ನಡಿಗೆ ನದಿಯ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಶಾಲೆಯಿಂದ ಸುಮಾರು ಎರಡು ಕಿ.ಮಿ. ದೂರದಲ್ಲಿರುವ ತುಂಗಭದ್ರಾ ನದಿ ಹಾಗೂ ನದಿ ದಂಡೆಯ ಮೇಲಿರುವ ಪುರಾತನ ಸ್ಮಾರಕಗಳ ವೀಕ್ಷಣೆಗೆ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಮುಖ್ಯ ಶಿಕ್ಷಕ ಎಸ್.ಸಿ. ಹರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಡಿಗೆಯುದ್ದಕ್ಕೂ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ಲಿನ ಜೀವ ಹಾಗೂ ಸಸ್ಯವೈವಿಧ್ಯವನ್ನು ಕುತೂಹಲದಿಂದ ಗಮನಿ ಸಿದರು.ದಾರಿಯಲ್ಲಿ ನೈಸರ್ಗಿಕವಾಗಿ ಬೆಳೆದ ಮಲೆನಾಡ ಹುಣಸೆ, ಅತಿಬಲ, ಮಹಾಬಲ, ನಗ್ಲಿ ಮುಳ್ಳು, ಇಂಗಳಾರ ಕಾಯಿ, ಹೊನ್ನ ಮುರಿಕೆ, ಬಿಳಿಯಕ್ಕ, ಆರಿ ಮರ, ಕುಪ್ಪಿ ಗಿಡ, ಗರಿಕೆ, ಕರಿ ಜಾಲಿ, ಹುಲಗಲಿ ಸೇರಿದಂತೆ ಮುಂತಾದ ಔಷಧೀಯ ಗುಣವುಳ್ಳ ಸಸ್ಯಗಳನ್ನು ಕುತೂಹಲದಿಂದ ವೀಕ್ಷಿಸಿದರು.
ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಅವರು ಪ್ರತಿಯೊಂದು ಸಸ್ಯದ ಮಾಹಿತಿ, ಔಷಧೀಯ ಗುಣಗಳು ಹಾಗೂ ಗ್ರಾಮೀಣ ಪ್ರದೇಶ ದಲ್ಲಿ ಅವುಗಳ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ನದಿ ದಂಡೆಯಲ್ಲಿ ಕಂಡುಬಂದ ಮೈನಾ, ಮಡಿವಾಳ, ಮಡಿವಾಳ ಬಕ, ನೀರು ಕಾಗೆ, ಸನ್ಬರ್ಡ್ ಸೇರಿದಂತೆ ಹಲವು ಪಕ್ಷಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಪಕ್ಷಿಗಳ ಜೀವನ ಪದ್ಧತಿ, ಆಹಾರ, ವಾಸಸ್ಥಾನ ಮತ್ತು ಪರಿಸರದಲ್ಲಿ ಅವುಗಳ ಮಹತ್ವದ ಕುರಿತು ತಿಳಿದುಕೊಂಡರು.
ಹಳೆಹೆಸರೂರು ಗ್ರಾಮವು ಸದಾ ಪ್ರವಾಹಕ್ಕೆ ಒಳಗಾಗುತ್ತಿತ್ತು. 1962ರಲ್ಲಿ ಅದನ್ನು ಸ್ಥಳಾಂತರಿಸಲಾಗಿದೆ. ಹಳೆಗ್ರಾಮದಲ್ಲಿ ಈಗಲೂ ಹಲವಾರು ಪುರಾತನ ಹಾಗೂ ಐತಿಹಾಸಿಕ ಕುರುಹು ಗಳಿದ್ದು, ಮಕ್ಕಳು ಪುರಾತನ ಪಳೆಯುಳಿಕೆಗಳತ್ತ ಪಯಣ ಬೆಳೆಸಿದರು. ಗ್ರಾಮದಲ್ಲಿರುವ ಸೇದುವ ನೀರಿನ ಬಾವಿ, 70-80ರ ದಶಕದ ಮನೆಗಳಲ್ಲಿ ನಿರ್ಮಿಸಲಾಗಿದ್ದ ಬಯೋಗ್ಯಾಸ್ ಘಟಕ, ಪುರಾತನ ಧಾನ್ಯ ಒಡೆಯುವ ರೋಲರ್, ಹೈದರಾಲಿಯ ಸೈನ್ಯದಿಂದ ಹಾನಿಗೊಳಗಾದ ಗರುಡಗಂಬ, ಬ್ರಿಟಿಷ್ ಅಧಿಕಾರಿ ಗಳ ಬೇಸಿಗೆ ತಂಗುದಾಣ,

1882ರ ಪ್ರವಾಹವನ್ನು ನೆನಪಿಸುವ ಗಡಿಕಲ್ಲು, ಶಂಕರಲಿಂಗನ ಗುಡಿ ಹಾಗೂ ಹಳೆಯ ಕೋಟೆಯ ಗೋಡೆಗಳನ್ನು ವಿದ್ಯಾರ್ಥಿ ಗಳು ಕುತೂಹಲದಿಂದ ವೀಕ್ಷಿಸಿದರು. ಗದುಗಿನ ಸಾಯಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಜಕ ಆನಂದ ತಿಪ್ಪಣ್ಣ ನವರ ಹಾಗೂ ತಂಡದವರು ಮಾದಕ ವಸ್ತುಗಳ ದುಷ್ಪರಿಣಾ ಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಜ್ಞಾನದ ಜೊತೆಗೆ ಸುತ್ತಮುತ್ತ ಲಿನ ಇತಿಹಾಸ, ಪರಂಪರೆ, ಸಂಸ್ಕೃತಿ ಮೊದಲಾದವುಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಇದು ಮಕ್ಕಳಿಗೆ ನೈಜ ಶಿಕ್ಷಣ ನೀಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು
ಸುದ್ದಿ ಸಂತೆ ನ್ಯೂಸ್ ಮುಂಡರಗಿ…..



